ಬದಿಯಡ್ಕ: ಬದುಕಿನಲ್ಲಿ ತಾತ್ಕಾಲಿಕವಾದ ಯಶÀದ ಬೆನ್ನೇರದೆ ಅನವರತ ಶುಭವಾಗುವ ಸದಾಶಿವನನ್ನು ಒಲಿಸಿಕೊಳ್ಳಬೇಕು. ಶಿವನೆಂದರೆ ಅನಶ್ವರವಾದ ಶುಭ. ಆದ್ದರಿಂದ ಚಿತ್ತ ಚಾಂಚಲ್ಯದ ತಾತ್ಕಾಲಿಕ ಶುಭದ ಬೆನ್ನೇರದೆ ಬದುಕಿಗೆ ಸದಾ ಶಿವನ ಶುಭಾನುಗ್ರಹಕ್ಕೆ ಪ್ರಾರ್ಥಿಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಪಾದಂಗಳವರು ನುಡಿದರು.
ಏತಡ್ಕ ಶ್ರೀ ಸದಾಶಿವ ದೇವಾಲಯದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಮಾರೋಫ ದಿನವಾದ ಭಾನುವಾರ ಸಂಜೆ ನಡೆದ ಶಿವಸಂದೇಶ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸನಾತನ ಧರ್ಮ ರಕ್ಷಣೆಗೆ ಆಧ್ಯಾತ್ಮಿಕ ಹಿನ್ನೆಲೆಯ ನಾಯಕರುಗಳ ಅಗತ್ಯವಿದೆ. ನಾಯಕರೆನಿಸಿಕೊಂಡವರಲ್ಲಿ ಧಾರ್ಮಿಕ ಹಿನ್ನೆಲೆ ಇಲ್ಲದೇ ಹೋದರೆ ಸನಾತನತೆಗೆ ರಕ್ಷಣೆ ಸಿಗಲಾರದು. ಕುಂಟಾರು ರವೀಶ ತಂತ್ರಿಗಳಂತಹ ತಂತ್ರಿಗಳು ಕೇವಲ ಗರ್ಭಗುಡಿಗೆ ಸೀಮಿತರಾದ ತಂತ್ರಿಗಳಾಗದೇ ಸಮಾಜಕ್ಕೂ ಬ್ರಹ್ಮಕಲಶ ಮಾಡುವ ಸಾಮಾಜಿಕ ತಂತ್ರಿಗಳಾಗಿದ್ದಾರೆ. ಇಂತಹ ಧಾರ್ಮಿಕ ಹಿನ್ನೆಲೆ ಉಳ್ಳವರಿಂದಲೇ ಸನಾತನ ಧರ್ಮ ಸಂರಕ್ಷಣೆ ಸಾಧ್ಯ ಎಂದವರು ಹೇಳಿದರು. ಶಿವಸಂದೇಶ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ವೈ.ಸುಬ್ರಾಯ ಭಟ್ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಧಾರ್ಮಿಕ ಸಂದೇಶ ನೀಡಿದರು. ಉಚ್ಚಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿ ಬಿ.ವಸಂತ ಪೈಬದಿಯಡ್ಕ ಉಪಸ್ಥಿತರಿದ್ದರು. ಚಂದ್ರಶೇಖರ ಏತಡ್ಕ ಸ್ವಾಗತಿಸಿ, ಡಾ.ವೈ.ವಿ.ಕೃಷ್ಣಮೂರ್ತಿ ವಂದಿಸಿದರು.
ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ:
ಭಾನುವಾರ ಮಧ್ಯಾಹ್ನ ಏತಡ್ಕ ಕ್ಷೇತ್ರಕ್ಕಾಗಮಿಸಿದ ರಾಘವೇಶ್ವರ ಶ್ರೀಗಳವರನ್ನು ಪೂರ್ಣಕುಂಭ ಸ್ವಾಗತಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀಕ್ಷೇತ್ರದಲ್ಲಿ ದೇವರ ದರ್ಶನಗೈದು ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳವರೊಂದಿಗೆ ಸಮಾಲೋಚನೆ ನಡೆಸಿದರು.

.jpg)

