ಬದಿಯಡ್ಕ: ಶ್ರೀಮಠದ ಶಿಷ್ಯವರ್ಗದಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿದವರಿದ್ದಾರೆ. ಒಂದೊಂದು ಮನೆ ಒಂದೊಂದು ಬಂಗಲೆಯಿದ್ದಂತೆ ಅರಮನೆಗೂ ಕಡಿಮೆಯಿಲ್ಲ. ಆದರೆ ಈ ಕುಟುಂಬವು 261 ಮನೆಗಳನ್ನು ದಾನಮಾಡಿ ಸಮಾನ್ಯ ಮನೆಯಲ್ಲಿ ವಾಸವಾಗಿದೆ. ತ್ಯಾಗದ ಜೀವನ ನಮ್ಮನ್ನು ಎತ್ತರಕ್ಕೇರಿಸುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ನುಡಿದರು.
ಕಿಳಿಂಗಾರು ಸಾಯಿನಿಲಯದಲ್ಲಿ ಸಾಯಿರಾಂ ಕೃಷ್ಣ ಭಟ್ಟರ ಮನೆಯಲ್ಲಿ ಸೋಮವಾರ ನಡೆದ ಭಿಕ್ಷಾಸೇವೆಯನ್ನು ಸ್ವೀಕರಿಸಿ ಸಾಯಿಮಂದಿರದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ನನ್ನದು ಎಂಬ ಗಾಢ ಗರ್ವ ಇರಬಾರದು. ಸಮಾಜಕ್ಕೆ ಏನನ್ನೂ ಕೊಡದೆ ತಾನೊಬ್ಬನೇ ತಿಂದರೆ ಅದು ಮೈಗೂಡುವುದಿಲ್ಲ. ಅರ್ಹನಿಗೆ ಕೈಯೆತ್ತಿ ದಾನ ಮಾಡಬೇಕು. ಯಾರಿಗೂ ಕೊಡದೇ ತಾನೂ ಅನುಭವಿಸದ ಸಂಪತ್ತು ನಾಶವಾಗುತ್ತದೆ ಎಂಬುದನ್ನು ಎಲ್ಲರೂ ಅರಿತಿರಬೇಕು ಎಂದರು. ಸಾಯಿರಾಂ ಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸ್ವ ಉದ್ಯೋಗಕ್ಕಾಗಿ ಬಡಜನರಿಗೆ ಹೊಲಿಗೆ ಯಂತ್ರದ ಚೆಕ್‍ನ್ನು ಶ್ರೀಗಳು ವಿತರಿಸಿದರು. ಪ್ರಸಿದ್ಧ ಗಾಯಕ ಶಶಿಧರ ಕೋಟೆ ಬೆಂಗಳೂರು, ಡಾ. ಪುರುಷೋತ್ತಮ ಭಟ್ ಕೊಲ್ಲಂಪಾರೆ ಹಾಗೂ ಡಾ. ಪದ್ಮಾವತಿ ಕೊಲ್ಲಂಪಾರೆ ದಂಪತಿಗಳು ಮತ್ತು ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಎಂಬ ಸಾಮಾಜಿಕ ಪುನರ್ವಸತಿ ಸಂಸ್ಥೆಯ ರೂವಾರಿಗಳಾದ ಡಾ. ಉದಯಕುಮಾರ್ ನೂಜಿ ಹಾಗೂ ಡಾ. ಶಾರದಾ ನೂಜಿ ದಂಪತಿಗಳನ್ನು ಗೌರವಿಸಲಾಯಿತು. ನಿವೃತ್ತ ಅಧ್ಯಾಪಕ ಶ್ಯಾಮಪ್ರಸಾದ ಕುಳಮರ್ವ ನಿರೂಪಿಸಿದರು.
ಬೆಳಗ್ಗೆ ಶ್ರೀ ಪಾದುಕಾಪೂಜೆ, ಶ್ರೀಪೂಜೆ, ಗುರುಭಿಕ್ಷಾ ಸೇವೆ ನಡೆಯಿತು. ಮುಳ್ಳೇರಿಯ ಹವ್ಯಕ ಮಂಡಲ ಪದಾಕಾರಿಗಳು, ಗುರಿಕ್ಕಾರರು, ಶಿಷ್ಯವೃಂದದವರು ಪಾಲ್ಗೊಂಡಿದ್ದರು. ನೀರ್ಚಾಲು ವಲಯದ ಕಾರ್ಯಕರ್ತರು ಸಹಕರಿಸಿದ್ದರು.


