ಕಾಸರಗೋಡು: ಬದಲಾದ ಕಾಲಾವಸ್ಥೆಗನುಸರಿಸಿ ಕೃಷಿ ಪದ್ಧತಿಯಲ್ಲಿ ಆವಿಷ್ಕಾರಗಳನ್ನು ತಂದುಕೊಳ್ಳುವ ಮೂಲಕ ಕಡಿಮೆ ವಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆಯುವ ಕೃಷಿ ವ್ಯವಸ್ಥೆಯನ್ನು ಚೆಂಗಳ ಪಂಚಾಯಿತಿ ಕೃಷಿ ಭವನ ಕೃಷಿಕರಿಗೆ ಪರಿಚಯಿಸುತ್ತಿದೆ.
ಸಾಂಪ್ರದಾಯಿಕ ಕೃಷಿ ವಿಧಾನಗಳಿಂದ ದೂರ ಸರಿದಿರುವ ಇಲ್ಲಿನ ಕೃಷಿಕರು ಸೀಮಿತ ಕಾರ್ಮಿಕರೊಂದಿಗೆ ಇಳುವರಿ ಹೆಚ್ಚಿಸುವ ನಿಖರವಾದ ಕೃಷಿ ಎಂಬ ಹೊಸ ವಿಧಾನದೊಂದಿಗೆ ಕೃಷಿ ಆರಂಭಿಸುತ್ತಿದ್ದಾರೆ. ಕೃಷಿಗೆ ಬೇಕಾದ ನೀರು ಮತ್ತು ಗೊಬ್ಬರವನ್ನು ಸರಿಯಾದ ಪ್ರಮಾಣದಲ್ಲಿ, ಸಕಾಲದಲ್ಲಿ ಆಯಾ ಸ್ಥಳಕ್ಕೆ ತಲುಪಿಸುವ ವ್ಯವಸ್ಥೆಯನ್ನು ಇಲಾಖೆ ನಡೆಸುತ್ತಿದೆ. ಮಿತವಾದ ನೀರಿನ ಬಳಕೆ, ಕೃಷಿಗೆ ಕೀಟಗಳ ಹಾವಳಿಯ ನಿಯಂತ್ರಣ, ಗುಣಮಟ್ಟದ ಬೆಳೆಯೊಂದಿಗೆ ಹೆಚ್ಚಿನ ಇಳುವರಿಯನ್ನು ಕೃಷಿಯಿಂದ ನಿರೀಕ್ಷಿಸಲಾಗುತ್ತಿದೆ. ಇನ್ ಲೈನ್ ಡ್ರಿಪ್ಪರ್ ತಂತ್ರಜ್ಞಾನದಿಂದ ನೀರನ್ನು ನೇರವಾಗಿ ಗಿಡಗಳ ಬೇರುಗಳಿಗೆ ತಲುಪಿಸುವುದರಿಂದ ನೀರು ಹೊರಕ್ಕೆ ಹರಿದು ಪೋಲಾಗದಂತೆ ಬಳಸಿಕೊಳ್ಳಲಾಗುತ್ತಿದೆ. ಉತ್ತಮ ಇಳುವರಿಯಿಂದ ಕೃಷಿಗಾಗಿ ವ್ಯಯಿಸುವ ಸಮಯ ಕಡಿಮೆಯಾಗಿ, ಕೃಷಿ ಲಾಭದಾಯಕವಾಗುತ್ತಿದೆ ಎಂಬುದಾಗಿ ಇಲ್ಲಿನ ಕೃಷಿಕರು ಅಭಿಪ್ರಾಯಪಡುತ್ತಾರೆ. ಕೃಷಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಲು ಯೋಜನೆ ಹಮ್ಮಿಕೊಂಡಿದೆ. ನೀರಾವರಿ ವ್ಯವಸ್ಥೆ, ರಸಗೊಬ್ಬರಕ್ಕಾಗಿ ಕೃಷಿಕರಿಗೆ ಅಗತ್ಯ ಮಾಹಿತಿಯನ್ನು ಕೃಷಿ ಇಲಾಖೆ ನೀಡುವುದರ ಜತೆಗೆ ಆರ್ಥಿಕ ನೆರªವನ್ನೂ ಒದಗಿಸುತ್ತದೆ.
ಎರಡು ಯೋಜನೆಗಳ ಮೂಲಕ ಸರ್ಕಾರದಿಂದ ನೆರವನ್ನು ಒದಗಿಸಲಾಗುತ್ತಿದೆ. ರಾಜ್ಯ ತೋಟಗಾರಿಕೆ ಮಿಷನ್ ವತಿಯಿಂದ ಪ್ರತಿ ಹೆಕ್ಟೇರ್‍ಗೆ 91,000 ರೂ. ಹಾಗೂ ವೆಜಿಟೇಬಲ್ ಡೆವೆಲಪ್‍ಮೆಂಟ್ ಪಾಜೆಕ್ಟ್ ಅನ್ವಯ 50ಸೆಂಟ್ ಸ್ಥಳದಲ್ಲಿ ಕೃಷಿ ನಡೆಸುವವರಿಗೆ 36ಸಾವಿರದ 400ರೂ. ಧನಸಹಾಯ ಒದಗಿಸಲಾಗುತ್ತಿದೆ.
ಚೆಂಗಳ ಅಸುಪಾಸು ವಿವಿಧ ಕೃಷಿ ಭೂಮಿಯಲ್ಲಿ ಕುಂಬಳಕಾಯಿ, ಸೌತೆಕಾಯಿ, ಕಲ್ಲಂಗಡಿ, ಬೆಂಡೆ, ದ್ವಿದಳ ಧಾನ್ಯ ಒಳಗೊಂಡ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಸಾಂಪ್ರದಾಯಿಕ ಕೃಷಿಗೆ ಹೋಲಿಸಿದರೆ ಸುಧಾರಿತ ರೀತಿಯ ಕೃಷಿ ವ್ಯವಸ್ಥೆಯಿಂದ ರೈತರು ಹೆಚ್ಚಿನ ಇಳುವರಿ ಹಾಗೂ ಗುಣಮಟ್ಟದ ಉತ್ಪನ್ನ ಪಡೆಯುತ್ತಿದ್ದಾರೆ ಎಂಬುದು ಕೃಷಿ ಇಲಾಖೆ ಅದಿಕಾರಿಗಳ ಅಭಿಪ್ರಾಯ.
ಇಲ್ಲಿನ ಕೃಷಿಕರು ಉತ್ಪನ್ನಗಳ ಮಾರಾಟಕ್ಕೆ ಕೇರಳದಲ್ಲಿನ ಪ್ರಾದೇಶಿಕ ಮಾರುಕಟ್ಟೆ ಜತೆಗೆ ಕರ್ನಾಟಕದ ಮಾರುಕಟ್ಟೆಗೂ ಉತ್ಪನ್ನ ಪೂರೈಸುತ್ತಿದ್ದಾರೆ. ಚೆಂಗಳ ಪಂಚಾಯಿತಿಯ ಚೆಂಗಳ, ನಾಯಮರ್‍ಮೂಲೆ, ಎಡನೀರು ಸೇರಿದಂತೆ ಈಗಾಗಲೇ ವಿವಿಧೆಡೆ ಈ ಯೋಜನೆಯನ್ವಯ ಕೃಷಿ ನಡೆಸಲಾಗುತ್ತಿದೆ. ಫಿಸಿಶೀಯನ್ ಫಾರ್ಮಿಂಗ್ ವ್ಯವಸ್ಥೆ ಚೆಂಗಳದ ರೈತರ ನಾಳೆಯ ಭರವಸೆಯಾಗುತ್ತಿದೆ.







