ಕಾಸರಗೋಡು: ಕೇರಳದಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವಿನ ಒಪ್ಪಂದದ ರಾಜಕೀಯದಿಂದ ರಾಜ್ಯದ ಜನತೆಗೆ ಮಾರಕವಾಗಲಿದ್ದು, ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗಲಿರುವುದಾಗಿ ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಅವರು ಕಾಸರಗೋಡು ಪೆರಿಯ ಕಲ್ಯೋಟ್‍ನಲ್ಲಿ ನಡೆದ ಯುವ ಕಾಂಗ್ರೆಸ್ ಮುಖಂಡರಾದ ಕೃಪೇಶ್-ಶರತ್‍ಲಾಲ್ ಸಂಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲ್ಯೋಟ್‍ನಲ್ಲಿನ ನಡೆದಿರುವ ಅವಳಿ ಕೊಲೆಕೃತ್ಯ ಕಮ್ಯೂನಿಸ್ಟ್ ಪಕ್ಷದ ಕೊಲೆಗಡುಕ ರಾಜಕೀಯಕ್ಕೆ ನಿದರ್ಶನವಾಗಿದೆ. ಕಮ್ಯೂನಿಸ್ಟರು ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂಸ್ಕೃತಿಗೆ ಸಾಕಷ್ಟು ಹಾನಿ ತಂದೊಡ್ಡಿದ್ದಾರೆ. ಕೃಪೇಶ್ ಮತ್ತು ಶರತ್‍ಲಾಲ್ ಹಂತಕರು ನ್ಯಾಯಾಂಗ ವ್ಯವಸ್ಥೆಯ ಮುಂದೆ ಉತ್ತರ ನೀಡಬೇಕಾದ ಅನಿವಾರ್ಯತೆ ಬರಲಿದೆ. ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಅಲ್ಲ, 40ವರ್ಷಕ್ಕೂ ಹಿಂದೆ ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ಚಟುವಟಿಕೆ ನಡೆಸಿದ ನೆನಪಿನಲ್ಲಿ ಇಲ್ಲಿ ನಾನು ಬಂದು ನಿಂತಿದ್ದೇನೆ. ಕಾಂಗ್ರೆಸ್‍ನಿಂದ ಮಾತ್ರ ದೇಶದಲ್ಲಿ ಸಮಗ್ರ ಅಭಿವೃದ್ಧಿ ತರಲು ಸಾಧ್ಯ ಎಂದು ತಿಳಿಸಿದರು.
25 ಲಕ್ಷ ಘೋಷಿಸಿದ ಡಿಕೆಶಿ:
ಕೃಪೇಶ್ ಮತ್ತು ಶರತ್‍ಲಾಲ್ ಅವರ ಸ್ಮರಣಾರ್ಥ ಕಾಸರಗೋಡು ಪೆರಿಯದ ಕಲ್ಯೋಟ್‍ನಲ್ಲಿ ನಿರ್ಮಿಸಲುದ್ದೇಶಿಸಿರುವ ಸಾಂಸ್ಕೃತಿಕ ಕೇಂದ್ರಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ 25 ಲಕ್ಷ ರೂ. ಅನುದಾನ ನೀಡುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅದ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ರಾಜ್ಯ ಸಮಿತಿ ಅಧ್ಯಕ್ಷ, ಸಂಸದ ಕೆ.ಸುಧಾಕರನ್ ಸಂಸ್ಮರಣಾ ಭಾಷಣ ಮಾಡಿದರು. ಕರ್ನಾಟಕ ಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಸಂಸದ ಶಫಿ ಪರಂಬಿಲ್, ಶಾಸಕರಾದ ರಾಹುಲ್ ಮಂಕೂಟತ್ತಿಲ್, ಸೋನಿ ಸೆಬಾಸ್ಟಿಯನ್, ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್, ಎ.ಗೋವಿಂದನ್ ನಾಯರ್, ಹಕೀಂ ಕುನ್ನಿಲ್, ರಿಜಿಲ್ ಮಕ್ಕುಟ್ಟಿ, ಬಿ.ಪಿ.ಪ್ರದೀಪಕುಮಾರ್, ಜೇಮ್ಸ್ ಪಂತಮ್ಮಕಲ್, ಟಾಮಿ ಪ್ಲಾಚೇರಿ, ಸಾಜಿದ್ ಮವ್ವಲ್, ಕೆ.ನೀಲಕಂಠನ್, ಖಾದರ್ ಮಾಙಡ್, ಎಂ.ಅಸಿನಾರ್, ಪಿ.ವಿ.ಸುರೇಶ್, ಧನ್ಯ ಸುರೇಶ್, ಗೀತಾಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.







