ನವದೆಹಲಿ: ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ವರ್ಷದಿಂದ ವರ್ಷಕ್ಕೆ ಜನನ ಪ್ರಮಾಣ ಕುಸಿಯುತ್ತಿರುವುದು ಕಳವಳ ಮೂಡಿಸಿದೆ. ದುಡಿಯುವ ಯುವವರ್ಗದ ಸಂಖ್ಯೆ ಕಡಿಮೆಯಾಗುತ್ತಿದ್ದು, ವೃದ್ಧರ ಸಂಖ್ಯೆ ಏರಿಕೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ 2080ರ ಹೊತ್ತಿಗೆ ಜನಸಂಖ್ಯೆಯಲ್ಲೂ ಇಳಿಕೆ ಕಂಡುಬರಲಿದೆ.
ಹಾಗಾಗಿಯೇ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚು ಮಕ್ಕಳನ್ನು ಹೊಂದಲು ದಂಪತಿಗೆ ಪ್ರೋತ್ಸಾಹಕ ಕ್ರಮಗಳನ್ನು ಘೋಷಿಸಲಾಗುತ್ತಿದೆ.
ಕಾಲಚಕ್ರದ ಓಟದಲ್ಲಿ ಪರಿಸ್ಥಿತಿ ಬದಲಾಗಿದೆ. ಮೊದಲು ಜಗತ್ತು 'ಜನಸಂಖ್ಯಾ ಸ್ಪೋಟ'ದಿಂದ ಚಿಂತಿತವಾಗಿತ್ತು. ಈಗ 'ಬೇಬಿ ಕ್ರೖೆಸಿಸ್' ಅಂದರೆ ಮಕ್ಕಳ ಜನನ ಕಡಿಮೆ ಆಗುತ್ತಿರುವುದರಿಂದ ಚಿಂತಿತವಾಗಿದೆ. ಜನನ ಪ್ರಮಾಣ ಕುಸಿಯುತ್ತ ಸಾಗಿದ್ದು, 2024ರಲ್ಲಿ ಸರಾಸರಿ 2.2ಕ್ಕೆ ತಲುಪಿದೆ. ಅಂದರೆ, ಜಗತ್ತಿನ 800 ಕೋಟಿ ಜನಸಂಖ್ಯೆಯ ಪೈಕಿ ಮಹಿಳೆಯರು ಸರಾಸರಿ 2.2 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. 1950ರಲ್ಲಿ ಈ ಸಂಖ್ಯೆ 5 ಇತ್ತು. ಏಳು ದಶಕಗಳಲ್ಲೇ ಶೇಕಡ 50ಕ್ಕಿಂತಲೂ ಹೆಚ್ಚು ಕುಸಿತ ಕಂಡುಬಂದಿದೆ. ಜನನ ಪ್ರಮಾಣ 2.1ಕ್ಕಿಂತ ಕಡಿಮೆಯಾದ ಬಳಿಕ ಜನಸಂಖ್ಯೆ ಇಳಿಕೆಯಾಗತೊಡಗುತ್ತದೆ. ಇದು ಸಾಮಾಜಿಕ, ಶೈಕ್ಷಣಿಕ, ಕೌಟುಂಬಿಕ, ಆರ್ಥಿಕ ಸೇರಿದಂತೆ ಬಹುಆಯಾಮದ ಸಮಸ್ಯೆಗಳನ್ನು ಸೃಷ್ಟಿಸಲಿದೆ. ಜನನ ಪ್ರಮಾಣ ದಕ್ಷಿಣ ಕೊರಿಯಾದಲ್ಲಿ 0.73, ಸಿಂಗಾಪುರ, ಹಾಂಗ್ಕಾಂಗ್ ಮತ್ತು ತೈವಾನ್ನಲ್ಲಿ 1.1 ಹಾಗೂ ಜಪಾನ್ನಲ್ಲಿ 1.3 ಇದೆ. ಇದು ಮುಂದಿನ ದಿನಗಳಲ್ಲಿ ಜನಸಂಖ್ಯೆಯ ಗಣಿತವನ್ನೇ ಬದಲಿಸಲಿದೆ ಮತ್ತು ಸ್ಥಿತ್ಯಂತರ ಸೃಷ್ಟಿಸಲಿದೆ.
ಭಾರತದಲ್ಲೂ ಕಳವಳದ ಸ್ಥಿತಿ
ಭಾರತದ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರಾಸರಿ ಜನನ ದರ 2.1ಕ್ಕಿಂತ ಕಡಿಮೆ ಇದೆ. ಜನಸಂಖ್ಯೆ ಕುಸಿಯುತ್ತಿರುವ ಸ್ಪಷ್ಟ ಸೂಚನೆ ಇದು. ಜನನ ಪ್ರಮಾಣ ಎಲ್ಲಕ್ಕಿಂತ ಕಡಿಮೆ ಸಿಕ್ಕಿಂನಲ್ಲಿ 1.1 ಇದ್ದರೆ, ಬಿಹಾರದಲ್ಲಿ ಹೆಚ್ಚು ಅಂದರೆ 3 ಇದೆ.
ಸಾಗಿಬಂದ ದಾರಿ
ಜಾಗತಿಕ ಜನನ ದರ 1950ರಲ್ಲಿ 5.0 ಇತ್ತು. 2073ರ ಹೊತ್ತಿಗೆ 2.1ಕ್ಕೆ ಕುಸಿಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈಗಾಗಲೇ ಜಗತ್ತಿನ 55% ದೇಶಗಳಲ್ಲಿ ಜನನ ಪ್ರಮಾಣ 2.1 ಅಥವಾ ಅದಕ್ಕಿಂತ ಕಡಿಮೆ ಇದೆ. 2050ರ ಹೊತ್ತಿಗೆ ಜಾಗತಿಕ ಜನನ ಪ್ರಮಾಣ 2.1ಕ್ಕೆ ಕುಸಿಯಲಿದೆ. ಅಂದರೆ, 23 ವರ್ಷಗಳ ಮುಂಚೆಯೇ ಈ ಸನ್ನಿವೇಶ ಸೃಷ್ಟಿಯಾಗಲಿದೆ. ಪರಿಣಾಮವಾಗಿ, 2080ರ ನಂತರ ಜನಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬರಲಿದೆ.
ಜಪಾನ್ ವಯೋವೃದ್ಧರ ದೇಶ
ಜಪಾನ್ನಲ್ಲಿ ಜನನ ದರ 1.21 ಇದೆ. ಅಂದರೆ ಹೊಸದಾಗಿ ಜನಿಸುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಪರಿಣಾಮ ಕಳೆದ ಎರಡು ದಶಕಗಳಲ್ಲೇ ಜಪಾನ್ನಲ್ಲಿ 9 ಸಾವಿರ ಶಾಲೆಗಳು ಶಾಶ್ವತವಾಗಿ ಬಂದ್ ಆಗಿವೆ. ವಯೋವೃದ್ಧರ ಸಂಖ್ಯೆ ಹೆಚ್ಚಿದೆ. ಹೀಗಾಗಿ, 'ವಯೋವೃದ್ಧರ ಆರೈಕೆ' ಹೊಸ ಮಾರುಕಟ್ಟೆಯಾಗಿ ಉಗಮವಾಗಿ, ಪ್ರತಿವರ್ಷ ಶೇಕಡ 7.50 ದರದೊಂದಿಗೆ ಬೆಳವಣಿಗೆ ಕಾಣುತ್ತಿದೆ. ಮಕ್ಕಳ ಡೈಪರ್ಗಿಂತ ಹೆಚ್ಚು ವೃದ್ಧರಿಗಾಗಿರುವ ಡೈಪರ್ ಮಾರಾಟವಾಗುತ್ತಿವೆ. ಒಟ್ಟು ಜನಸಂಖ್ಯೆ: 12.50 ಕೋಟಿ
ತೈವಾನ್ನಲ್ಲಿ 15 ವಿವಿ ಬಂದ್
ತೈವಾನ್ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಪರಿಣಾಮ, 2014ರ ನಂತರ 15 ವಿಶ್ವವಿದ್ಯಾಲಯಗಳನ್ನು ಹಾಗೂ 4 ಕಾಲೇಜುಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿರುವುದರಿಂದ 2028ರವರೆಗೆ ಇನ್ನೂ 40-50 ವಿವಿಗಳು ಮುಚ್ಚುವ ಅಪಾಯದಲ್ಲಿವೆ. ಒಂದೇ ದಶಕದಲ್ಲಿ ಶಾಲಾ ವಿದ್ಯಾರ್ಥಿಗಳ ಸಂಖ್ಯೆ 23 ಲಕ್ಷದಿಂದ 18 ಲಕ್ಷಕ್ಕೆ ಕುಸಿದಿದೆ. ಒಟ್ಟು ಜನಸಂಖ್ಯೆ: 2.34 ಕೋಟಿ

ಸೇನೆ ಸೇರಲು ಯುವಕರಿಲ್ಲ!
ದಕ್ಷಿಣ ಕೊರಿಯಾದಲ್ಲಿ ಜನನ ಪ್ರಮಾಣ ಕುಸಿತದ ಕಾರಣ ಯುವಕರ ಸಂಖ್ಯೆ ಕ್ಷೀಣಿಸಿದೆ. ಪ್ರಸ್ತುತ ಜಗತ್ತಿನಲ್ಲೇ ಅತಿ ಕಡಿಮೆ ಜನನ ದರ (0.73) ಹೊಂದಿರುವ ದೇಶ ದಕ್ಷಿಣ ಕೊರಿಯಾ. ಕಳೆದ 3 ವರ್ಷಗಳಲ್ಲಿ 100 ಶಾಲೆಗಳು ಬಾಗಿಲು ಹಾಕಿವೆ. ಸೇನೆಗೆ ಸೇರಲು ಯುವಕರು ಸಿಗದಂಥ ಸನ್ನಿವೇಶ ಸೃಷ್ಟಿಯಾಗಿದೆ. ದಕ್ಷಿಣ ಕೊರಿಯಾ ಸೇನೆಯಲ್ಲಿ 2017ರಲ್ಲಿ 6.20 ಲಕ್ಷ ಯೋಧರಿದ್ದರು. 2022ರಲ್ಲಿ ಈ ಸಂಖ್ಯೆ 5 ಲಕ್ಷಕ್ಕೆ ಕುಸಿದಿದೆ. ಪ್ರತಿ ವರ್ಷ ಸರಾಸರಿ 2 ಲಕ್ಷ ಸೈನಿಕರ ಅಗತ್ಯವಿದೆ. ಆದರೆ, 1.25 ಲಕ್ಷ ಯುವಕರು ಲಭ್ಯರಾಗುತ್ತಿದ್ದು, 75 ಸಾವಿರ ಯೋಧರ ಕೊರತೆ ಕಾಡುತ್ತಿದೆ.
ಹಳ್ಳಿಗಳಲ್ಲಿ 60% ವೃದ್ಧರು
ಗ್ರೀಸ್ನಲ್ಲಿ ಜನನ ದರ 1.2 ಇದೆ. ಹಲವು ಗ್ರಾಮಗಳಲ್ಲಿ ಕಳೆದ ಕೆಲ ವರ್ಷಗಳಿಂದ ಒಂದು ಮಗು ಕೂಡ ಜನಿಸಿಲ್ಲ. ಹಳ್ಳಿಗಳ ಜನಸಂಖ್ಯೆಯಲ್ಲಿ ಶೇಕಡ 60ರಷ್ಟು ವೃದ್ಧರೇ ತುಂಬಿಕೊಂಡಿದ್ದಾರೆ. ದುಡಿಯುವ ಕೈಗಳು ಕಡಿಮೆ ಆಗಿರುವುದರಿಂದ ಕೌಟುಂಬಿಕ ಬಜೆಟ್ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಗ್ರೀಸ್ನ ಕೆಲ ದ್ವೀಪಗಳಲ್ಲಿ ಯುವಕರ ಸಂಖ್ಯೆ 50%ರಷ್ಟು ಕಡಿಮೆಯಾಗಿದೆ. 2050ರವರೆಗೆ ಜನಸಂಖ್ಯೆ 20%ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಒಟ್ಟು ಜನಸಂಖ್ಯೆ: 1.04 ಕೋಟಿ
ಜಗತ್ತಿನ 55% ದೇಶಗಳಲ್ಲಿ ಜನನ ಪ್ರಮಾಣ 2.1ಕ್ಕಿಂತ ಕಡಿಮೆ ಇದೆ. ಇದರಲ್ಲಿ ಭಾರತ, ಚೀನಾ, ಅಮೆರಿಕ, ಬ್ರೆಜಿಲ್, ರಷ್ಯಾ ದೇಶಗಳು ಸೇರಿವೆ.
28% ದೇಶಗಳಲ್ಲಿ 2.5ಕ್ಕಿಂತ ಹೆಚ್ಚು. ಇದರಲ್ಲಿ ನೈಜಿರಿಯಾ, ಯೆಮನ್ ಸೇರಿ ಹಲವು ದೇಶಗಳು ಸೇರಿವೆ.
ಭಾರತೀಯ ಮಹಿಳೆಯರು ಸರಾಸರಿ 21.2 ವರ್ಷಕ್ಕೆ ಮೊದಲ ಬಾರಿ ತಾಯಿಯಾಗುತ್ತಾರೆ. ಕೊನೆಯ ಮಗುವಿಗೆ ಜನ್ಮ ನೀಡುವ ಸರಾಸರಿ ವಯಸ್ಸು 32.8ರಿಂದ 27.6ಕ್ಕೆ ಇಳಿಕೆಯಾಗಿದೆ.
ಭಾರತದಲ್ಲಿ ಈಗ ದೊಡ್ಡ ಕುಟುಂಬಗಳ ಸಂಖ್ಯೆ ಕ್ಷೀಣಿಸಿದೆ ಮತ್ತು ಇದು ಇಳಿಕೆಯ ಹಾದಿಯಲ್ಲೇ ಸಾಗಲಿದೆ. ಭಾರತದ ಶೇಕಡ 10ಕ್ಕೂ ಕಡಿಮೆ ತಾಯಂದಿರಿಗೆ 5ಕ್ಕೂ ಹೆಚ್ಚು ಮಕ್ಕಳಿದ್ದಾರೆ.
ಜಾಗತಿಕ ಮಟ್ಟದಲ್ಲಿ 1960ರಿಂದ 2000ರ ಅವಧಿಯಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚಿತು. 21ನೇ ಶತಮಾನದ ಆರಂಭದಿಂದಲೇ ಈ ವೇಗ ಕ್ಷೀಣಿಸಿತು. 12 ವರ್ಷಗಳಲ್ಲಿ 100 ಕೋಟಿ ಜನರ ಸೇರ್ಪಡೆಯಾಯಿತು.
ಜಗತ್ತಿನ ಜನಸಂಖ್ಯೆ 2022ರ ನವೆಂಬರ್ 15ರಂದು 800 ಕೋಟಿಗೆ ತಲುಪಿತು. 700 ಕೋಟಿಯಿಂದ 800 ಕೋಟಿಗೆ ತಲುಪಲು 12 ವರ್ಷಗಳು ಬೇಕಾದವು. 800 ಕೋಟಿಯಿಂದ 900 ಕೋಟಿಗೆ ತಲುಪಲು 15 ವರ್ಷಗಳು ಬೇಕಾಗಲಿವೆ. ತಜ್ಞರ ಪ್ರಕಾರ 2037ರ ಹೊತ್ತಿಗೆ ಜಗತ್ತಿನ ಜನಸಂಖ್ಯೆ 900 ಕೋಟಿಗೆ ತಲುಪಲಿದೆ.




