HEALTH TIPS

ಉಪಟಳ ನೀಡುವ ಕಾಡುಹಂದಿಗಳ ನಿಗ್ರಹಕ್ಕೆ ಸರ್ಕಾರದ ನೆರವು-ಕೃಷಿಕರಲ್ಲಿ ಗರಿಗೆದರಿದ ಭರವಸೆ

ಕಾಸರಗೋಡು: ಕೃಷಿಕರಿಗೆ ಹೆಚ್ಚಿನ ಉಪಟಳ ನೀಡುತ್ತಿರುವ ಕಾಡುಹಂದಿಗಳ ನಿಗ್ರಹಕ್ಕೆ ಸರ್ಕಾರ ಅವಕಾಶ ನೀಡಿರುವುದಲ್ಲದೆ, ಕೊಲ್ಲುವ ಪ್ರತಿ ಹಂದಿಗೆ ಒಂದೂವರೆ ಸಾವಿರ ರೂ. ಗೌರವಧನವನ್ನೂ ಪ್ರಕಟಿಸಿದೆ. ಕಾಡಿನಿಂದ ನಾಡಿಗಿಳಿದು ಕೃಷಿಗೆ ಉಪಟಳ ನೀಡುವ ಹಾಗೂ ನಾಗರಿಕ ಜೀವಕ್ಕೆ ಅಪಾಯ ತಂದೊಡ್ಡುವ ಕಾಡುಹಂದಿಗಳನ್ನು ಗುಂಡಿಟ್ಟು ಕೊಲ್ಲುವ ಅಂಗೀಕೃತ ಶೂಟರ್‍ಗಳಿಗೆ ಕೇರಳ ಸರ್ಕಾರ ಈ ಗೌರವಧನ ಘೋಷಿಸಿದೆ.

ನಾಡಿಗಿಳಿದು ಈ ರೀತಿ ಉಪಟಳ ನೀಡುವ ಹಂದಿಯನ್ನು ಕೊಂದರೆ 1500ರೂ ಮತ್ತು ಅದರ ಕಳೇಬರವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಿದರೆ 2ಸಾವಿರ ರೂ ಗೌರವಧನ ನೀಡುವುದಾಗಿ ಪ್ರಕಟಿಸಲಾಗಿದೆ. ಜಿಲ್ಲಾ ವಿಪತ್ತು ನಿವಾರಣ ಪ್ರಾಧಿಕಾರವು ಈ ಮೊತ್ತವನ್ನು ಸ್ಥಳೀಯಾಡಳಿತ ಸಂಸ್ಥೆಗೆ ನೀಡಲಿದೆ. ಹಂದಿಗೆ ಗುಂಡಿಕ್ಕಿ ಕೊಂದು, ಅದರ ಕಳೇಬರ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸುವುದನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದೃಢೀಕರಿಸಿದ ನಂತರವಷ್ಟೆ ಗೌರವಧನ ಲಭ್ಯವಾಗಲಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಹಂದಿಗಳ ಉಪಟಳವಿದ್ದಲ್ಲಿ, ಪಂಚಾಯಿತಿಯಿಂದ ಪ್ರತ್ಯೇಕವಾಗಿ ಅನುಮತಿ ಪಡೆದುಕೊಂಡಿರುವ ಶಾರ್ಪ್ ಶೂಟರ್‍ಗಳಿಗೆ ಮಾತ್ರವೇ ಈ ಹಂದಿಗಳನ್ನು ಕೊಲ್ಲಲು ಅನುಮತಿಯಿರಲಿದೆ. 

ಪಂಚಾಯಿತಿಗಳಿಗೆ ಹೊರೆಯಾಗಿದ್ದ ಯೋಜನೆ:

ಉಪಟಳ ನೀಡುವ ಕಾಡುಹಂದಿಗಳನ್ನು ನಿಗ್ರಹಿಸುವ ಸರ್ಕಾರದ ಕಾನೂನನ್ನು ಕಾಸರಗೋಡು ಜಿಲ್ಲೆಯಲ್ಲಿ ಎಣ್ಮಕಜೆ ಪಂಚಾಯಿತಿ ಅಂದೇ ಜಾರಿಗೊಳಿಸಿತ್ತು. ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್ ಅವರು ನೇತೃತ್ವ ವಹಿಸಿ, ಶಾರ್ಪ್ ಶೂಟರ್‍ಗಳನ್ನು ಇತರ ಜಿಲ್ಲೆಗಳಿಂದ ಕರೆಸಿ  ಹಂದಿಗಳನ್ನು ಕೊಲ್ಲುವ ಮೂಲಕ ಕೃಷಿಕರಲ್ಲಿ ಆಶಾಭಾವನೆ ಮೂಡಿಸಿದ್ದರು.  ವನ್ಯಜೀವಿ ಸಂರಕ್ಷಣಾ ಕಾಯ್ದೆ ಸಎಕ್ಷನ್ 5(2)ಪ್ರಕಾರ ಡೆಲಿಕೇಟ್ ಮಾಡಿ ಲಭಿಸಿದ ವೈಲ್ಡ್ ಲೈಫ್ ವಾರ್ಡನ್ ಅಧಿಕಾರ ಬಳಸಿಕೊಂಡು ಅಂಗೀಕೃತ ಶೂಟರ್‍ಗಳಿಗೆ ಜವಾಬ್ದಾರಿ ನೀಡಿ ಕಾಡುಹಂದಿಗಳನ್ನು ನಿಗ್ರಹಿಸುವ ಕೆಲಸ ನಡೆಸಲಾಗಿತ್ತು. ಆದರೆ 10ರಿಂದ 15ಮಂದಿಯನ್ನೊಳಗೊಂಡ ಶಾರ್ಪ್‍ಶೂಟರ್‍ಗಳ ತಂಡಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಹಂದಿಗಳು ಲಭ್ಯವಾಗದ ಹಾಗೂ ಲಭಿಸಿದ ಹಂದಿಗಳನ್ನು ಅರಣ್ಯ ಇಲಾಖೆ ನಿಬಂಧನೆ ಪ್ರಕಾರ, ವೈಜ್ಞಾನಿಕ ರೀತಿಯಲ್ಲಿ ದಫನ ಮಾಡುವ ವಿಚಾರದಲ್ಲಿ ತಲೆದೋರಿದ ಸಮಸ್ಯೆಯಿಂದ ಯೋಜನೆಯನ್ನು ಅಲ್ಪಾವಧಿಯಲ್ಲಿ ಕೈಬಿಡಬೇಕಾಗಿ ಬಂದಿತ್ತು. ಅಲ್ಲದೆ ಈ ವೆಚ್ಚವನ್ನು ಸ್ಥಳೀಯಾಡಳಿತ ಸಂಸ್ಥೆಗಳೇ ಭರಿಸಬೇಕಾಗಿ ಬಂದಿರುವುದೂ ಪಂಚಾಐಇತಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿತ್ತು. ಪ್ರಸಕ್ತ ಸರ್ಕಾರ ಗೌರವಧನ ನೀಡುವುದರ ಜತೆಗೆ ದಫನ ಪ್ರಕ್ರಿಯೆಯನ್ನೂ ನಡೆಸಲು ಮುಂದಾಗಿರುವುದು ಪಂಚಾಯಿತಿಗಳಿಗೆ ಒಂದಷ್ಟು ಸಮಾಧಾನ ತಂದುಕೊಟ್ಟಿದೆ.

ಜಿಲ್ಲೆಯ ಎಣ್ಮಕಜೆ, ಬೆಳ್ಳೂರು, ಬೇಡಡ್ಕ, ಮುಳಿಯಾರು ಸೇರಿದಂತೆ ನಾನಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಹಂದಿ, ಕೋತಿ ಸೇರಿದಂತೆ ವಿವಿಧ ವನ್ಯಜೀವಿಗಳ ಉಪಟಳ ಹೆಚ್ಚಾಗಿದ್ದು, ಇವುಗಳಲ್ಲಿ ಕಾಡುಹಂದಿ ಕೃಷಿನಾಶಗೊಳಿಸುವುದರ ಜತೆಗೆ ಮನುಷ್ಯರ ಜೀವಕ್ಕೂ ಅಪಾಯ ತಂದೊಡ್ಡುತ್ತಿರುವುದರಿಂದ ಇವುಗಳ ನಿಗ್ರಹಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳು ಹೆಚ್ಚಿನ ಗಮನಹರಿಸುವಂತೆ ಕೃಷಿಕರೂ ಆಗ್ರಹಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries