ನೀಮಚ್: ದೇಶದ ಕೇವಲ 4 ಜಿಲ್ಲೆಗಳಲ್ಲಿ ಮಾತ್ರ ನಕ್ಸಲಿಸಂ ಇದ್ದು, ಮುಂದಿನ ವರ್ಷ ಮಾರ್ಚ್ 31ರ ವೇಳೆಗೆ ನಿರ್ಮೂಲನೆ ಮಾಡಲಾಗುವುದು. ಈ ಯೋಜನೆಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಬೆನ್ನುಲುಬಾಗಿರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಧ್ಯ ಪ್ರದೇಶದ ನೀಮಚ್‌ನಲ್ಲಿ ನಡೆದ ಸಿಆರ್‌ಪಿಎಫ್‌ನ 86ನೇ ನಿಧಿ ಸಂಗ್ರಹ ದಿನದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
'ದೇಶದಲ್ಲಿ ನಕ್ಸಲಿಸಂ ಕೇವಲ 4 ಜಿಲ್ಲೆಗಳಿಗೆ ಸೀಮಿತವಾಗಿದೆ. 2026ರ ಮಾರ್ಚ್ 31ರ ವೇಳೆಗೆ ಅದು ನಿರ್ಮೂಲನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ, ಕೇಂದ್ರ ಶಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್), ಸಿಆರ್‌ಪಿಎಫ್ ಅದರಲ್ಲೂ ವಿಶೇಷವಾಗಿ ಅದರ ಕೋಬ್ರಾ ಪಡೆ ದೇಶದಲ್ಲಿ ನಕ್ಸಲಿಸಂ ತೊಡೆದು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ' ಎಂದು ಹೇಳಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಿಆರ್‌ಪಿಎಫ್ 400 ಮುಂಚೂಣಿ ಕಾರ್ಯಾಚರಣಾ ನೆಲೆಗಳನ್ನು ಸ್ಥಾಪಿಸಿದೆ. ಇದರಿಂದಾಗಿ ಆ ಪ್ರದೇಶಗಳಲ್ಲಿ ನಕ್ಸಲ್ ಉಪಟಳ ಶೇ 70ರಷ್ಟು ಕಡಿಮೆಯಾಗಿದೆ. ಈಗ ನಾವು ಅದನ್ನು ಕೊನೆಗೊಳಿಸುವ ಸನಿಹದಲ್ಲಿದ್ದೇವೆ' ಎಂದು ಶಾ ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರೊಂದಿಗೆ ಹೋರಾಡುವುದಾಗಲಿ, ಈಶಾನ್ಯದಲ್ಲಿ ಶಾಂತಿ ಸ್ಥಾಪಿಸುವುದರಲ್ಲಿಯಾಗಲಿ ಅಥವಾ ನಕ್ಸಲರನ್ನು ಕೇವಲ ನಾಲ್ಕು ಜಿಲ್ಲೆಗೆ ಸೀಮಿತಗೊಳಿಸುವುದರಲ್ಲಿ ಆಗಲಿ, ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಸಿಆರ್‌ಪಿಎಫ್‌ಗೆ ಯಾವುದೂ ಸರಿಸಾಟಿ ಇಲ್ಲ ಎಂದು ಹೇಳಿದ್ದಾರೆ.
'ಎಲ್ಲಾ ಸಾಧನೆಗಳಲ್ಲಿ ಸಿಆರ್‌ಪಿಎಫ್ ಯೋಧರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕರ್ತವ್ಯ ಪ್ರಜ್ಞೆ ಮತ್ತು ಧೈರ್ಯದ ಬಗ್ಗೆ ಎಷ್ಟು ಪುಸ್ತಕ ಬರೆದರೂ ಸಾಲದು, ನಕ್ಸಲಿಸಂಗೆ ಮೂಗುದಾರ ಹಾಕಿದ್ದು ಸಿಎರ್‌ಪಿಎಫ್‌ನ ಪ್ರಮುಖ ಸಾಧನೆಗಳಲ್ಲೊಂದು' ಎಂದು ಶಾ ಕೊಂಡಾಡಿದ್ದಾರೆ.
ಸಿಆರ್‌ಪಿಎಫ್‌ನ ಕೋಬ್ರಾ ಪಡೆ ಬರುತ್ತಿದೆ ಎಂದರೆ ಭಯನಾಕ ನಕ್ಸಲರು ಕೂಡ ನಡುಗುತ್ತಾರೆ ಎಂದು ಅಮಿತ್ ಶಾ ಹೇಳಿದ್ದಾರೆ.





