ಪೆರ್ಲ :ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಹಾಗೂ ಎಣ್ಮಕಜೆಯ ಚೌಗ್ರಾಮ ದೇವಾಲಯವೆಂದೇ ಖ್ಯಾತಿ ಪಡೆದಿರುವ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೇ 6ರಿಂದ 12ರ ವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಕೀಕಾಂಗೋಡು ನೀಲೇಶ್ವರದ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಗೌರವಾಧ್ಯಕ್ಷ ಹಾಗೂ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಸ ಸ್ವಾಮೀಜಿ ಮತ್ತು ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ಗೌರವ ಮಾರ್ಗದಶಿಗಳಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮೇ 6ರಂದು ಬೆಳಗ್ಗೆ 10.30ಕ್ಕೆ ಪೆರ್ಲ ಶ್ರೀ ಸತ್ಯನಾರಾಯಣ ಭಜನಾಮಂದಿರ ವಠಾರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಅಡ್ಕಸ್ಥಳ ಹಾದಿಯಾಗಿ ದೇವಸ್ಥಾನಕ್ಕೆ ತಲುಪಲಿದೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಸ ಸ್ವಾಮೀಜಿ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡುವರು.
ನಂತರ ಉಗ್ರಾಣ ಮುಹೂರ್ತ ನಡೆಯುವುದು. ಸಂಜೆ 6ಕ್ಕೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯಕ್ರಮ ನಡೆಯುವುದು. 7.30ಕ್ಕೆ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಈ ಸಂದರ್ಭ ನೂತನ ಸೇವಾ ಕೊಠಡಿಗಳ ಉದ್ಘಾಟನೆ ನಡೆಯುವುದು.ಮಲಬಾರ್ ದೇವಸ್ವಂ ಆಯುಕ್ತ ಟಿ.ಸಿ ಬಿಜು ಉದ್ಘಾಟಿಸುವರು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧೀರ್‍ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸುವರು. ರಾತ್ರಿ 10ಕ್ಕೆ ಭಜನಾ ಸಂಕೀರ್ತನೆ ಆರಂಭಗೊಳ್ಳುವುದು. ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.
7 ಹಾಗೂ 8ರಂದು ಬೆಳಗ್ಗೆ 7ರಿಂದ ಗಣಪತಿ ಹವನ, ವಿವಿಧ ವೈದಿಕ ಕಾರ್ಯಕ್ರಮ, ಭಜನಾ ಸಂಕೀರ್ತನೆ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು. 9ರಂದು ಸಂಜೆ 5ಕ್ಕೆ ನವಾವರಣ ಕೀರ್ತನೆ, ಅಷ್ಟಾವಧಾನ ಸೇವೆ ಸಹಿತ ಶ್ರೀಚಕ್ರಪೂಜೆ ನಡೆಯುವುದು. 11ರಂದು ಬೆಳಗ್ಗೆ 7ಕ್ಕೆ ಗಣಪತಿ ಹವನ, 8.26ರಿಂದ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯುವುದು. ಮಧ್ಯಾಹ್ನ 2ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಸಂಜೆ 7ಕ್ಕೆ ಶ್ರೀರಂಗಪೂಜೆ, ಶ್ರೀದೇವರ ಬಲಿ, ಶ್ರೀಭೂತಬಲಿ, ಪಲ್ಲಕ್ಕಿ ಉತ್ಸವ, ಚಂದ್ರಮಂಡಲ ರಥೋತ್ಸವ, ದರ್ಶನಬಲಿ, ಬಟ್ಟಲು ಕಾಣಿಕೆ ನಡೆಯುವುದು. 12ರಂದು ಬೆಳಗ್ಗೆ 7.50ಕ್ಕೆ ಉಷ:ಪೂಜೆ, ಭಂಡಾರ ಇಳಿಸುವುದು, 10ಕ್ಕೆ ಪಿಲಿಭೂತದ ನೇಮ ನಡೆಯುವುದು.





