ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು ಇಟಲಿ ಹಾಗೂ ಭಾರತ ಪ್ರವಾಸವನ್ನು ಏ. 18ರಿಂದ 24ರವರೆಗೆ ಕೈಗೊಂಡಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ಬುಧವಾರ ತಿಳಿಸಿದೆ.
ಆರ್ಥಿಕ ಮತ್ತು ಜಾಗತಿಕ ರಾಜಕೀಯ ವಿದ್ಯಮಾನಗಳ ಕುರಿತು ತಮ್ಮ ಈ ಭೇಟಿಯಲ್ಲಿ ಎರಡೂ ರಾಷ್ಟ್ರಗಳ ಮುಖಂಡರೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ ಎಂದೆನ್ನಲಾಗಿದೆ.
ಈ ಪ್ರವಾಸದ ಸಂದರ್ಭದಲ್ಲಿ ಇಟಲಿ ರೋಮ್‌ನಲ್ಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರನ್ನು ವ್ಯಾನ್ಸ್ ಭೇಟಿ ಮಾಡಲಿದ್ದಾರೆ. ರೋಮ್‌ನ ವ್ಯಾಟಿಕನ್‌ನಲ್ಲಿ ಕಾರ್ಯದರ್ಶಿ ಕಾರ್ಡಿನಲ್ ಪೀಟ್ರೊ ಪ್ಯಾರೊಲಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.
ಭಾರತ ಪ್ರವಾಸದ ವೇಳೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಾನ್ಸ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಜೈಪುರ ಮತ್ತು ಆಗ್ರಾಕ್ಕೂ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.





