HEALTH TIPS

ನ್ಯಾಷನಲ್ ಹೆರಾಲ್ಡ್ ಪ್ರಕರಣ | ಸರ್ಕಾರ ನೈತಿಕವಾಗಿ ದಿವಾಳಿಯಾಗಿದೆ: ಕಾಂಗ್ರೆಸ್

 ನವದೆಹಲಿ: 'ನ್ಯಾಷನಲ್ ಹೆರಾಲ್ಡ್‌' ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಕೇಂದ್ರ ಸರ್ಕಾರಕ್ಕೆ ಇರುವ ಭಯವನ್ನು, ಅದು ನೈತಿಕವಾಗಿ ದಿವಾಳಿ ಆಗಿರುವುದುನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.

ಅಸೋಸಿಯೇಟೆಡ್‌ ಜರ್ನಲ್ಸ್‌ಗೆ (ಎಜೆಎಲ್) ಸೇರಿದ ₹5,000 ಕೋಟಿ ಮೌಲ್ಯದ ಆಸ್ತಿಗಳನ್ನು ಯಂಗ್ ಇಂಡಿಯನ್ ಕಂಪನಿಯು ತನ್ನದಾಗಿಸಿಕೊಂಡಿದೆ ಎಂಬ ಆರೋಪವು ಸುಳ್ಳು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಹಿಂದೆ 'ನ್ಯಾಷನಲ್‌ ಹೆರಾಲ್ಡ್‌'ಗೆ ಬ್ರಿಟಿಷರು ಭಯಪಡುತ್ತಿದ್ದರು. ಈಗ ಆರ್‌ಎಸ್‌ಎಸ್‌ಗೆ ಆ ರೀತಿ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪವನ್ ಖೇರಾ ಅವರು 'ಎಕ್ಸ್‌' ಮೂಲಕ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.


'ಲಾಭದ ಉದ್ದೇಶ ಹೊಂದಿಲ್ಲದ, ಒಂದು ರೂಪಾಯಿ ವಹಿವಾಟನ್ನೂ ನಡೆಸಿರದ, ಯಾವ ಆಸ್ತಿಯ ವರ್ಗಾವಣೆಯನ್ನೂ ಮಾಡಿರದ ಕಂಪನಿಯೊಂದರ ವಿರುದ್ಧ ಹಣದ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿರುವುದು ನರೇಂದ್ರ ಮೋದಿ ಅವರಲ್ಲಿನ ಭೀತಿಯನ್ನು ತೋರಿಸುತ್ತಿದೆ' ಎಂದು ಖೇರಾ ಹೇಳಿದ್ದಾರೆ.

ಜೈರಾಮ್ ವಿವರಣೆ: ಎಜೆಎಲ್‌ ಕಂಪನಿಯು 'ನ್ಯಾಷನಲ್ ಹೆರಾಲ್ಡ್' ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಪತ್ರಿಕೆಯು ಸ್ವಾತಂತ್ರ್ಯ ಹೋರಾಟದ ದನಿ ಆಗಿತ್ತು. ಎಜೆಎಲ್‌ಗೆ ಭಾರಿ ಸಾಲ ಇತ್ತು. ಹೀಗಾಗಿ ಕಾಂಗ್ರೆಸ್ ಪಕ್ಷವು ಅದಕ್ಕೆ 2002ರಿಂದ 2011ರ ನಡುವೆ ₹90 ಕೋಟಿ ಸಾಲ ನೀಡಿತು. ಈ ಸಾಲವನ್ನು ಗ್ರಾಚ್ಯುಟಿ, ವಿಆರ್‌ಎಸ್‌, ಪಿಎಫ್‌, ತೆರಿಗೆ, ವಿದ್ಯುತ್ ಬಿಲ್‌ ಪಾವತಿಗಳಿಗೆ ಬಳಸಲಾಯಿತು ಎಂದು ಜೈರಾಮ್ ರಮೇಶ್ ವಿವರಿಸಿದ್ದಾರೆ.

ಸಾಲದ ಕಾರಣದಿಂದಾಗಿ ಎಜೆಎಲ್‌ ಚಟುವಟಿಕೆ ನಿಂತಿತ್ತು. ಹೀಗಾಗಿ ಅದರ ಸಾಲವನ್ನು ಷೇರುಗಳನ್ನಾಗಿ ಪರಿವರ್ತಿಸಿ, ಯಂಗ್‌ ಇಂಡಿಯನ್ ಕಂಪನಿಗೆ ವರ್ಗಾಯಿಸಲಾಯಿತು. ಇದು ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ವ್ಯವಸ್ಥೆ. ಹಲವು ಕಂಪನಿಗಳ ಸಾಲವನ್ನು ಸರ್ಕಾರವೇ ಷೇರುಗಳನ್ನಾಗಿ ಪರಿವರ್ತಿಸಿದೆ. ಯಂಗ್ ಇಂಡಿಯನ್‌ ಕಂಪನಿಯು ಲಾಭದ ಉದ್ದೇಶ ಹೊಂದಿಲ್ಲ. ಅದರ ಷೇರುದಾರರಿಗೆ ಲಾಭ, ಲಾಭಾಂಶ, ವೇತನದ ರೂಪದಲ್ಲಿ ಒಂದು ಪೈಸೆಯೂ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಯಂಗ್ ಇಂಡಿಯನ್‌ಗೆ ನಾಲ್ವರು ಷೇರುದಾರರಿದ್ದರು. ಅವರು: ಸೋನಿಯಾ, ರಾಹುಲ್, ಆಸ್ಕರ್ ಫರ್ನಾಂಡಿಸ್ ಮತ್ತು ಮೋತಿಲಾಲ್ ವೋರಾ. ಎಜೆಎಲ್‌ಗೆ 700 ಮಂದಿ ಷೇರುದಾರರಿದ್ದರು. 700 ಮಂದಿ ಷೇರುದಾರರ ಅನುಮತಿ ಪಡೆದೇ ಸಾಲವನ್ನು ಷೇರುಗಳನ್ನಾಗಿ ಪರಿವರ್ತಿಸಲಾಯಿತು ಎಂದು ರಮೇಶ್ ವಿವರಣೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು 2013ರಲ್ಲಿ ಕೋರ್ಟ್‌ ಮೊರೆಹೋದರು. 2020ರವರೆಗೂ ಅವರು ಪ್ರಕರಣದಲ್ಲಿ ಹೋರಾಟ ನಡೆಸಿದರು. ನಂತರ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾತನಾಡಲು ಆರಂಭಿಸಿದರು. ಇದರಿಂದಾಗಿ ಮೋದಿ ಮತ್ತು ಶಾ ಅವರು ತಲೆಕೆಡಿಸಿಕೊಂಡರು ಎಂದು ರಮೇಶ್ ಆರೋಪಿಸಿದ್ದಾರೆ.

'ಭೀತಿಯಿಂದಾಗಿ ಸರ್ಕಾರವು ಇನ್ನೊಂದು ಪ್ರಕರಣ ದಾಖಲಿಸಿತು. 2023ರಲ್ಲಿ ಇ.ಡಿ ತಾತ್ಕಾಲಿಕ ಮುಟ್ಟುಗೋಲು ಆದೇಶ ಹೊರಡಿಸಿತು... ಇ.ಡಿ ಅಧಿಕಾರಿಗಳು ಏಪ್ರಿಲ್‌ 9ರಂದು ನಕಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅದನ್ನು ಈಗ ಬಹಿರಂಗಪಡಿಸಲಾಗಿದೆ' ಎಂದು ರಮೇಶ್ ಹೇಳಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ/ಜಮ್ಮು: 'ನ್ಯಾಷನಲ್ ಹೆರಾಲ್ಡ್‌' ಪ್ರಕರಣದಲ್ಲಿ ಇ.ಡಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಎಐಸಿಸಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಜಮ್ಮುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ಪೊಲೀಸರು ತಡೆ ಒಡ್ಡಿದರು. ದೇಶದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries