ನವದೆಹಲಿ: ಮರ್ಯಾದೆಗೇಡು ಹತ್ಯೆ ಪ್ರಕರಣವೊಂದರಲ್ಲಿ ಆರೋಪಿಗಳ ವಿರುದ್ಧ 'ಕೊಲೆ ಎನಿಸದ ಅಪರಾಧಿಕ ಹತ್ಯೆ' ಆರೋಪ ಹೊರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಆರೋಪಿಗಳ ವಿರುದ್ಧ ಕೊಲೆಗೆ ಸಂಬಂಧಿಸಿದ ಕಠಿಣ ಅವಕಾಶಗಳಡಿ ಆರೋಪ ಹೊರಿಸುವಂತೆ ಆದೇಶಿಸಿದೆ.
ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಒಂದೇ ಕುಟುಂಬದ ಸದಸ್ಯರ ವಿರುದ್ಧ 'ಕೊಲೆ ಎನಿಸದ ಅಪರಾಧಿಕ ಹತ್ಯೆ' ಆರೋಪ ಹೊರಿಸಿ ವಿಚಾರಣಾ ನ್ಯಾಯಾಲಯ ಹಾಗೂ ಉತ್ತರ ಪ್ರದೇಶ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇದ್ದ ಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.
'ಹತ್ಯೆಯಾಗಿರುವ 26 ವರ್ಷದ ಜಿಯಾ ಉರ್ ರಹಮಾನ್ ತಂದೆ ಅಯ್ಯುಬ್ ಅಲಿ ಅವರೊಂದಿಗೆ ಸಮಾಲೋಚಿಸಿ, ಸಹಾರನಪುರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. ಇದಕ್ಕಾಗಿ ವಿಶೇಷ ಸರ್ಕಾರಿ ವಕೀಲರನ್ನು (ಎಸ್‌ಪಿಪಿ) ನೇಮಕ ಮಾಡಬೇಕು' ಎಂದು ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿಗೆ ಪೀಠವು ನಿರ್ದೇಶನ ನೀಡಿದೆ.
ನಾಲ್ವರು ಆರೋಪಿಗಳು ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸುವಂತೆಯೂ ಪೀಠ ಸೂಚನೆ ನೀಡಿದೆ.
2023ರಲ್ಲಿ ರಹಮಾನ್, ಅನ್ಯಕೋಮಿಗೆ ಸೇರಿದ ತನ್ನ ಸಂಗಾತಿಯೊಂದಿಗೆ ಇದ್ದಾಗ, ಅವರ ಮೇಲೆ ಕಬ್ಬಿಣದ ಸರಳು ಹಾಗೂ ಬಡಿಗೆಗಳಿಂದ ಹಲ್ಲೆ ನಡೆಸಲಾಗಿತ್ತು. ಗಂಭೀರ ಗಾಯಗಳಿಂದಾಗಿ ರಹಮಾನ್ ಮೃತಪಟ್ಟಿದ್ದರು.
ಈ ಸಂಬಂಧ ರಹಮಾನ್ ತಂದೆ ಅಲಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಸಹಾರನಪುರ ನ್ಯಾಯಾಲಯ ಕಳೆದ ವರ್ಷ ಫೆಬ್ರುವರಿ 27ರಂದು ಆದೇಶಿಸಿತ್ತು. ನಂತರ ಹೈಕೋರ್ಟ್ ಕೂಡ ಇವರು ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿ ಕಳೆದ ವರ್ಷ ಆಗಸ್ಟ್ 31ರಂದು ಆದೇಶಿಸಿತ್ತು.




