ಚೆನ್ನೈ: 'ರಾಜ್ಯಗಳ ಹಕ್ಕುಗಳನ್ನು ಕೇಂದ್ರ ಸರ್ಕಾರವು ನಿಧಾನವಾಗಿ ಕಸಿದುಕೊಳ್ಳುತ್ತಿದ್ದು, ರಾಜ್ಯದ ಸ್ವಾಯತ್ತತೆ ಕುರಿತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು' ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿಧಾನಸಭೆಯಲ್ಲಿ ಮಂಗಳವಾರ ಘೋಷಿಸಿದ್ದಾರೆ.
ಮುಖ್ಯಮಂತ್ರಿಯ ನಿರ್ಧಾರವನ್ನು ತೀವ್ರವಾಗಿ ಟೀಕಿಸಿರುವ ವಿರೋಧ ಪಕ್ಷ ಎಐಎಡಿಎಂಕೆ, 'ಕಾಂಗ್ರೆಸ್ ನೇತೃತ್ವದ ಯುಪಿಎ ಜೊತೆಗೆ ಈ ಹಿಂದೆ ಅಧಿಕಾರ ಹಂಚಿಕೊಂಡಿದ್ದ ಡಿಎಂಕೆ ಇಷ್ಟು ವರ್ಷಗಳ ಕಾಲ ಏನು ಮಾಡುತ್ತಿತ್ತು' ಎಂದು ಪ್ರಶ್ನಿಸಿದೆ. ಜನರ ದೃಷ್ಟಿಯನ್ನು ಬೇರೆ ಕಡೆಗೆ ತಿರುಗಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ ಎಂದು ದೂರಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಕಿಡಿಕಾರಿದ ಸ್ಟಾಲಿನ್, 'ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುತ್ತದೆ. 2026ರ ಜನವರಿಯಲ್ಲಿ ಸಮಿತಿಯು ಮಧ್ಯಂತರ ವರದಿ ಸಲ್ಲಿಸಲಿದೆ. ಎರಡು ವರ್ಷಗಳ ಬಳಿಕ ಅಂತಿಮ ವರದಿಯನ್ನು ನೀಡಲಿದೆ' ಎಂದು ತಿಳಿಸಿದರು.
ಮಾಜಿ ಅಧಿಕಾರಿ ಅಶೋಕ್‌ವರ್ಧನ್ ಶೆಟ್ಟಿ, ರಾಜ್ಯ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಎಂ.ನಾಗನಾಥನ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.
'ರಾಜ್ಯಪಟ್ಟಿಯಿಂದ ಸಮವರ್ತಿ ಪಟ್ಟಿಗೆ ಕೆಲವು ವಿಷಯಗಳನ್ನು ಸೇರಿಸಲಾಗಿದೆ. ಅವನ್ನು ರಾಜ್ಯಪಟ್ಟಿಗೇ ಕಾನೂನಿನ ಚೌಕಟ್ಟಿನಲ್ಲಿ ವರ್ಗಾಯಿಸುವ ಸಾಧ್ಯತೆಯ ಕುರಿತು ಸಮಿತಿಯು ಅಧ್ಯಯನ ನಡೆಯಲಿದೆ. ನೀಟ್ ವಿಚಾರದಲ್ಲಿ ರಾಜ್ಯಗಳ ವ್ಯಾಪ್ತಿಯ ಬಗ್ಗೆ ಕೂಡ ನಿರ್ಧರಿಸಲಿದೆ' ಎಂದು ಸ್ಟಾಲಿನ್ ತಿಳಿಸಿದರು.
ಸ್ಟಾಲಿನ್ ಘೋಷಣೆ ಮಾಡಿದ ಬೆನ್ನಲ್ಲೇ, ಬಿಜೆಪಿ ನಾಲ್ಕು ಮಂದಿ ಶಾಸಕರು ಸದನ ಬಹಿಷ್ಕರಿಸಿ ಹೊರನಡೆದರು.
'ಅರ್ಧ ಶತಮಾನದ ಹಿಂದೆ ಸ್ಟಾಲಿನ್ ತಂದೆ ಕರುಣಾನಿಧಿ ಕೂಡ ಇದೇ ರೀತಿ ಸಮಿತಿ ರಚಿಸಿದ್ದರು. ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಜನರ ದೃಷ್ಟಿಯನ್ನು ಬೇರೆ ಕಡೆಗೆ ತಿರುಗಿಸುವ ದೃಷ್ಟಿಯಿಂದ ಡಿಎಂಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ' ಎಂದು ಆರೋಪಿಸಿ, ಎಐಡಿಎಂಕೆ ಶಾಸಕಾಂಗ ಪಕ್ಷದ ಉಪನಾಯಕ ಆರ್.ಬಿ.ಉದಯ್‌ಕುಮಾರ್ ನೇತೃತ್ವದಲ್ಲಿ ಸದನ ಬಹಿಷ್ಕರಿಸಿದರು.

