ಗುವಾಹಟಿ: ಭಾರತ ಹಾಗೂ ಮ್ಯಾನ್ಮಾರ್ ದೇಶದ ಗಡಿಭಾಗದಲ್ಲಿ ಬೇಲಿ ನಿರ್ಮಾಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಮಣಿಪುರದ ಪ್ರಮುಖ ಏಳು ಸಮುದಾಯಗಳು ಅಸಮಾಧಾನ ವ್ಯಕ್ತಪಡಿಸಿವೆ. ನಿರ್ಮಾಣಕ್ಕೆ ಬೇಕಿರುವ ಜಾಗ ನೀಡದಿರಲು ತೀರ್ಮಾನಿಸಿವೆ.
ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸಿದ ಎರಡು ದಿನಗಳ ಬಳಿಕ ಉಭಯ ರಾಷ್ಟ್ರಗಳ ಗಡಿಭಾಗವಾದ ಮೊರೆಹಾದಲ್ಲಿ ಸಭೆ ನಡೆಸಿದ ಕುಕಿ ಸಮುದಾಯದ ಮುಖ್ಯಸ್ಥರು, ಕೇಂದ್ರ ಸರ್ಕಾರದ ನಿರ್ಧಾರವನ್ನು ಎಲ್ಲರೂ ವಿರೋಧಿಸಬೇಕು ಎಂದು ಕರೆ ನೀಡಿದ್ದಾರೆ.
'ಬೇಲಿ ನಿರ್ಮಾಣ ಮಾಡಿದರೆ, ದೈನಂದಿನ ಜೀವನ ಹಾಗೂ ಸಂಸ್ಕೃತಿಯ ಮೇಲೆ ಪರಿಣಾಮ ಬೀರಲಿದೆ. ಕುಕಿಗಳು ಅಕ್ರಮವಾಗಿ ಮ್ಯಾನ್ಮಾರ್‌ನಿಂದ ವಲಸೆ ಬಂದಿದ್ದಾರೆ' ಎಂಬ ವಾದವನ್ನು ತಳ್ಳಿಹಾಕಿದ್ದಾರೆ.
ಮೊರೆಹಾ ಪಟ್ಟಣವು ಮಣಿಪುರದ ಟೆಂಗ್‌ನೌಪಾಲ್ ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಕುಕಿ ಸಮುದಾಯದವರು ಬಹುಸಂಖ್ಯಾತರಾಗಿದ್ದು, 2023ರ ಹಿಂಸಾಚಾರದ ಬಳಿಕ ಮೈತೇಯಿಗಳು ಕೂಡ ಇಲ್ಲಿ ನೆಲಸಿದ್ದಾರೆ.
ಮ್ಯಾನ್ಮಾರ್ ಹಾಗೂ ಭಾರತ ನಡುವಿನ 1,643 ಕಿ.ಮೀ. ಉದ್ದದ ಗಡಿಯಲ್ಲಿ ಬೇಲಿ ಹಾಕಲು ₹30 ಸಾವಿರ ಕೋಟಿ ಮೊತ್ತದ ಯೋಜನೆಗೆ ಕೇಂದ್ರ ಸರ್ಕಾರವು ಅನುಮತಿ ನೀಡಿತ್ತು. ಮಣಿಪುರದ ಬಹುಸಂಖ್ಯಾತ ಸಮುದಾಯವಾದ ಮೈತೇಯಿ ಒಡ್ಡಿದ ಬೇಡಿಕೆ ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. 'ಗಡಿಭಾಗದಲ್ಲಿ ಅಕ್ರಮ ವಲಸೆ ತಡೆಗಟ್ಟುವುದು, ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರು.
ಸರ್ಕಾರದ ನಿರ್ಧಾರವನ್ನು ಮೈತೇಯಿ ಸಮುದಾಯದವರು ಸ್ವಾಗತಿಸಿದ್ದಾರೆ. ಎರಡೂ ದೇಶಗಳ ನಡುವೆ ಹಂಚಿರುವ ಸಮುದಾಯಗಳನ್ನು ವಿಭಜಿಸುತ್ತಿದೆ ಎಂದು ಆರೋಪಿಸಿ ಕುಕಿ, ಮಿಜೊ ಹಾಗೂ ನಾಗಾ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮ್ಯಾನ್ಮಾರ್ ದೇಶದ ಜೊತೆಗೆ ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ ಹಾಗೂ ಅರುಣಾಚಲಪ್ರದೇಶ ಗಡಿ ಹಂಚಿಕೊಂಡಿದೆ.

