ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ಕುರಿತು ಬಾಂಗ್ಲಾದೇಶದ ಅಧಿಕಾರಿಗಳ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ.
ಜನಪ್ರಿಯತೆ ಮತ್ತು ಪ್ರಖ್ಯಾತಿಗಾಗಿ ಇಂಥ ಕೆಲಸದಲ್ಲಿ ತೊಡಗುವ ಬದಲು ತನ್ನ ದೇಶದಲ್ಲಿರುವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಗಮನ ನೀಡುವಂತೆ ಬಾಂಗ್ಲಾದೇಶಕ್ಕೆ ಭಾರತ ಸಲಹೆ ನೀಡಿದೆ.
ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, 'ಪಶ್ಚಿಮ ಬಂಗಾಳ ಹಿಂಸಾಚಾರದ ವಿಚಾರ ಸಂಬಂಧ ಬಾಂಗ್ಲಾದೇಶದ ಹೇಳಿಕೆಯನ್ನು ನಾವು ತಿರಸ್ಕರಿಸುತ್ತೇವೆ. ಬಾಂಗ್ಲಾದೇಶದಲ್ಲಿ ಅಪರಾಧಿಗಳು ನಿರಾಳವಾಗಿ ಓಡಾಡುತ್ತಿದ್ದು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳ ಕುರಿತ ಭಾರತದ ಕಳವಳವನ್ನು ಮರೆಮಾಚುವ ಯತ್ನವಾಗಿದೆ' ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಹಿಂಸಾಚಾರದ ಕುರಿತು ಗುರುವಾರ ಪ್ರಸ್ತಾಪಿಸಿದ್ದ ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರ ಮಾಧ್ಯಮ ಕಾರ್ಯದರ್ಶಿ, 'ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ರಕ್ಷಣೆಗಾಗಿ ಭಾರತ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಮುಸ್ಲಿಮರ ಮೇಲಿನ ದಾಳಿ ಮತ್ತು ಸಾವು-ನೋವು ಹಾಗೂ ಆಸ್ತಿಗೆ ಧಕ್ಕೆಯಾಗುವ ಹಿಂಸಾಚಾರವನ್ನು ಖಂಡಿಸುತ್ತೇವೆ' ಎಂದಿದ್ದರು.




