HEALTH TIPS

ಇವಿಎಂ ತಿರುಚುವಿಕೆ ಆರೋಪವನ್ನು 'ಅತೃಪ್ತ ಪೊಲೀಸ್ ಅಧಿಕಾರಿಯ ಆರೋಪ' ಎಂದು ಅಲ್ಲಗಳೆದ ಚುನಾವಣಾ ಆಯೋಗ: ವರದಿ ಸಲ್ಲಿಕೆಗೆ ಸೂಚನೆ

ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ ವಿದ್ಯುನ್ಮಾನ ಮತ ಯಂತ್ರ(EVM)ಗಳನ್ನು ತಿರುಚಲಾಗಿತ್ತು ಎಂದು ಮಹಾರಾಷ್ಟ್ರ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಸಿದ್ದ ವೀಡಿಯೊ ಹಾಗೂ ಆ ವೀಡಿಯೊವನ್ನು ಹಂಚಿಕೊಂಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕುರಿತು ರವಿವಾರ ಪ್ರತಿಕ್ರಿಯಿಸಿರುವ ಭಾರತೀಯ ಚುನಾವಣಾ ಆಯೋಗ (ECI), ಈ ಆರೋಪವನ್ನು ಅಮಾನತುಗೊಂಡಿರುವ ರಂಜಿತ್ ಕಸಳೆ ಎಂಬ ಪೊಲೀಸ್ ಅಧಿಕಾರಿಯೊಬ್ಬರು ಮಾಡಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅಲ್ಲಗಳೆದಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ಚುನಾವಣಾ ಆಯೋಗ, "ಈ ಆರೋಪವು ಅಮಾನತಿನಲ್ಲಿರುವ ಅತೃಪ್ತ ಪೊಲೀಸ್ ಅಧಿಕಾರಿಯೊಬ್ಬರಿಂದ ಬಂದಿದೆ. ಕಟ್ಟುನಿಟ್ಟನ ಕಾನೂನು ಆಡಳಿತ ಹಾಗೂ ಶಿಷ್ಟಾಚಾರದ ಮೂಲಕ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದ ವಿದ್ಯುನ್ಮಾನ ಮತ ಯಂತ್ರಗಳನ್ನು ಹೊರ ತೆಗೆಯಬಲ್ಲ ಯಾವುದೇ ಸಾಧ್ಯತೆಗಳಿರಲಿಲ್ಲ. ಈ ಆರೋಪದ ಗಂಭೀರತೆಯನ್ನು ಪರಿಗಣಿಸಿ, ಮುಖ್ಯ ಚುನಾವಣಾಧಿಕಾರಿ ಮೂಲಕ ಜಿಲ್ಲಾಧಿಕಾರಿ ಹಾಗೂ ವಿಶೇಷ ಪೊಲೀಸ್ ವರಿಷ್ಠಾಧಿಕಾರಿಗಳಿಂದ ವರದಿಯನ್ನು ಕೋರಲಾಗಿದೆ. ವರದಿ ಸ್ವೀಕರಿಸಿದ ನಂತರ, ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಸ್ಪಷ್ಟಪಡಿಸಿದೆ.

ಪೊಲೀಸ್ ಅಧಿಕಾರಿಯೊಬ್ಬರು ಮಾಡಿದ್ದ ಆರೋಪದ ವೀಡಿಯೊವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ನಂತರ, ಭಾರತೀಯ ಚುನಾವಣಾ ಆಯೋಗದಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಅಖಿಲೇಶ್ ಯಾದವ್, "ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಲು ಬಿಜೆಪಿ ಸದಸ್ಯರು ನನ್ನ ಖಾತೆಗೆ 10 ಲಕ್ಷ ರೂ. ಜಮೆ ಮಾಡಿದ್ದರು ಎಂದು ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿರುವುದು ಬಿಜೆಪಿಯ ಬೃಹತ್ ಭ್ರಷ್ಟಾಚಾರವನ್ನು ಬಯಲುಗೊಳಿಸಿದೆ. ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಲು ಅವರು ಯಾರನ್ನು ಬಳಸಿಕೊಳ್ಳುತ್ತಾರೆ ಎಂದು ಪ್ರಶ್ನಿಸುತ್ತಿದ್ದವರಿಗೆ ಇಂದು ಉತ್ತರ ದೊರೆತಿರಬಹುದು" ಎಂದು ಹೇಳಿದ್ದರು.

ವಿದ್ಯುನ್ಮಾನ ಮತ ಯಂತ್ರಗಳ ತಿರುಚುವಿಕೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದ ವಿರುದ್ಧ ರಂಜಿತ್ ಕಸಳೆ ಮಾಡಿದ್ದ ಆರೋಪಗಳ ವೀಡಿಯೊವನ್ನು ಶನಿವಾರ ಕಾಂಗ್ರೆಸ್ ಪಕ್ಷ ಕೂಡಾ ಎಕ್ಸ್ ನಲ್ಲಿ ಹಂಚಿಕೊಂಡಿತ್ತು.

ಕಾಂಗ್ರೆಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದ ಭಾರತೀಯ ಚುನಾವಣಾ ಆಯೋಗ, ವಿದ್ಯುನ್ಮಾನ ಮತ ಯಂತ್ರಗಳನ್ನು ನಿರ್ವಹಿಸಲು ಅನುಸರಿಸಲಾಗಿದ್ದ ಶಿಷ್ಟಾಚಾರದಲ್ಲಿ ಅವನ್ನು ತಿರುಚಲು ಅವಕಾಶವೇ ಇರಲಿಲ್ಲ. ಈ ಸಂಬಂಧ, ಮುಖ್ಯ ಚುನಾವಣಾಧಿಕಾರಿಯ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ವಿಶೇಷ ಪೊಲೀಸ್ ವರಿಷ್ಠಾಧಿಕಾರಿಗಳಿಂದ ವರದಿ ಕೋರಲಾಗಿದ್ದು, ವರದಿಯನ್ನು ಆಧರಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಸಮರ್ಥಿಸಿಕೊಂಡಿತ್ತು.

ಈ ಕುರಿತು ಮತ್ತೊಂದು ಪ್ರತ್ಯೇಕ ಪೋಸ್ಟ್ ಮಾಡಿದ್ದ ಭಾರತೀಯ ಚುನಾವಣಾ ಆಯೋಗ, "ಘಟನೆ ನಡೆದ ವೇಳೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆದ ರಂಜಿತ್ ಕಸಳೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಚುನಾವಣಾ ಕರ್ತವ್ಯದಲ್ಲಿರಲಿಲ್ಲ. ಸಾರ್ವಜನಿಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಹಾಗೂ ಹಿಂಸಾಚಾರಕ್ಕೆ ಕುಮ್ಮಕ್ಕು ತರುವ ಉದ್ದೇಶದೊಂದಿಗೆ ಈ ಆರೋಪಗಳನ್ನು ಮಾಡಲಾಗಿದೆ ಎನ್ನಲಾಗಿದೆ" ಎಂದು ವರದಿಯೊಂದನ್ನು ಹಂಚಿಕೊಂಡಿತ್ತು.

"ಬೀಡ್ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ವಿಶೇಷ ಪೊಲೀಸ್ ವರಿಷ್ಠಾಧಿಕಾರಿಗಳ ವರದಿಯ ಪ್ರಕಾರ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ ಅಮಾನತುಗೊಂಡಿರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರಂಜಿತ್ ಕಸಳೆ ಚುನಾವಣಾ ಕರ್ತವ್ಯದಲ್ಲಿರಲಿಲ್ಲ. ಈ ಆರೋಪಗಳು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಶಾಂತಿಯನ್ನು ಭಂಗಗೊಳಿಸುವ ಗುರಿ ಹೊಂದಿದ್ದು, ಸರಕಾರದ ವಿರುದ್ಧ ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಉದ್ದೇಶ ಹೊಂದಿವೆ. ಕಸಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದೂ ಆ ಪೋಸ್ಟ್ ನಲ್ಲಿ ಹೇಳಲಾಗಿತ್ತು.

ವಿದ್ಯುನ್ಮಾನ ಮತ ಯಂತ್ರಗಳ ಸಂಗ್ರಹದ ಕುರಿತು ತಪ್ಪು ಮಾಹಿತಿಗಳನ್ನು ಹರಡುತ್ತಿರುವ ಆರೋಪದ ಮೇಲೆ ರಂಜಿತ್ ಕಸಳೆ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಬೀಡ್ ಜಿಲ್ಲೆಯ ಚುನಾವಣಾಧಿಕಾರಿ ಕೂಡಾ ಭಾರತೀಯ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

"ವಿದ್ಯುನ್ಮಾನ ಮತ ಯಂತ್ರಗಳ ಸಂಗ್ರಹದ ವಿರುದ್ಧ ವದಂತಿಗಳನ್ನು ಹರಡಿ, ತಮ್ಮ ಈ ಹೇಳಿಕೆಯ ಮೂಲಕ, ಸಾರ್ವಜನಿಕ ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ತಂದ ಆರೋಪದ ಮೇಲೆ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಯ ವಿರುದ್ಧ 17/04 ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಕಟ್ಟುನಿಟ್ಟಿನ ಕ್ರಮದ ನಂತರ, ವರದಿಯೊಂದನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ" ಎಂದು ಮತ್ತೊಂದು ಪೋಸ್ಟ್ ನಲ್ಲಿ ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ಬೆನ್ನಿಗೇ, ವಿದ್ಯುನ್ಮಾನ ಮತ ಯಂತ್ರಗಳ ತಿರುಚುವಿಕೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪಕ್ಷ ಹಲವು ಆರೋಪಗಳನ್ನು ಮಾಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries