HEALTH TIPS

ಡ್ರೋನ್‌ ಗಳ ಪಾತ್ರ ನಿರ್ಣಾಯಕ: ರಾಜನಾಥ್‌ ಸಿಂಗ್‌

ನವದೆಹಲಿ: 'ಉಪಗ್ರಹಗಳು, ಡ್ರೋನ್‌ ಸೇರಿದಂತೆ ಭೂಮಿಯ ಕೆಳ ಕಕ್ಷೆಯಲ್ಲಿ (ಎಲ್‌ಇಒ) ಕಾರ್ಯಾಚರಣೆ ನಡೆಸುವ 'ಬಾಹ್ಯಾಕಾಶ ಸಂಪನ್ಮೂಲ'ಗಳು ಭಾರತದ ಯುದ್ಧ ಸಾಮರ್ಥ್ಯ ಹೆಚ್ಚಿಸಿವೆ. ಅದರಲ್ಲೂ, ಆಧುನಿಕ ಯುದ್ಧದಲ್ಲಿ ಡ್ರೋನ್‌ಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ' ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಗುರುವಾರ ಹೇಳಿದ್ದಾರೆ.

ತಮಿಳುನಾಡಿನ ನೀಲಗಿರಿ ಜಿಲ್ಲೆ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್‌ ಸರ್ವೀಸಸ್ ಸ್ಟಾಫ್‌ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

'ಭಾರತವು ಸೇನೆಗೆ ಸಂಬಂಧಿಸಿದ ಬಾಹ್ಯಾಕಾಶ ನೀತಿಯೊಂದನ್ನು 2-3 ತಿಂಗಳಲ್ಲಿ ಸಿದ್ಧಪಡಿಸಲಿದೆ' ಎಂದು ಚೀಫ್‌ ಆಫ್ ಡಿಫೆನ್ಸ್‌ ಸ್ಟಾಫ್ ಜನರಲ್ ಅನಿಲ್‌ ಚೌಹಾಣ್‌ ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ, ಸಚಿವ ರಾಜನಾಥ್‌ ಸಿಂಗ್ ನೀಡಿರುವ ಈ ಹೇಳಿಕೆಗೆ ಮಹತ್ವ ಬಂದಿದೆ.

'ಆಧುನಿಕ ಯುದ್ಧಗಳ ಸ್ವರೂಪ ಬದಲಾಗಿದೆ. ಹೊಸದಾದ ತಂತ್ರಗಾರಿಕೆ ಹಾಗೂ ಸಾಧನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ, ಡ್ರೋನ್‌ಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ' ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

'ಗುಪ್ತಚರ ಸೇವೆ, ಕಣ್ಗಾವಲು, ಗುರಿ ನಿರ್ದೇಶಿತ ಕಾರ್ಯಾಚರಣೆ ಹಾಗೂ ಸಂವಹನ ಕ್ಷೇತ್ರಕ್ಕೆ ಸಂಬಂಧಿಸಿ ಬಾಹ್ಯಾಕಾಶ ಸಂಪನ್ಮೂಲಗಳು ನಮ್ಮ ಭದ್ರತಾ ಪಡೆಗಳ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಒಯ್ದಿವೆ' ಎಂದು ಹೇಳಿದ್ದಾರೆ.

'ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಡ್ರೋನ್‌ಗಳು ಹೊಸ ಮಾದರಿಯ ಆಯುಧವಾಗಿ ಹೊರಹೊಮ್ಮಿವೆ. ಈ ದೇಶಗಳ ನಡುವಿನ ಯುದ್ಧದಲ್ಲಿ ಸಾಕಷ್ಟು ಸಂಖ್ಯೆಯ ಯೋಧರು ಪ್ರಾಣ ಕಳೆದಕೊಂಡಿದ್ದಾರೆ. ಯೋಧರ ಸಾವಿನ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಬದಲಾಗಿ ಡ್ರೋನ್‌ಗಳೇ ಕಾರಣ ಎಂಬುದು ಗಮನಾರ್ಹ' ಎಂದು ಹೇಳಿದ್ದಾರೆ.

'ಈಗ ಏನಿದ್ದರೂ ಹೈಬ್ರೀಡ್ ಯುದ್ಧಗಳ ಯುಗ. ಸೈಬರ್‌ ದಾಳಿ, ದೇಶವೊಂದರ ಕುರಿತು ತಪ್ಪು ಮಾಹಿತಿಗಳ ಪ್ರಸಾರ ಹಾಗೂ ಆರ್ಥಿಕತೆ ಮೇಲಿನ ದಾಳಿಗಳೇ ಈ ಹೈಬ್ರೀಡ್‌ ಯುದ್ಧದ ತಂತ್ರಗಳಾಗಿವೆ. ಒಂದೇ ಒಂದು ಗುಂಡು ಹಾರಿಸದೆಯೇ ತಮ್ಮ ರಾಜಕೀಯ ಹಾಗೂ ಮಿಲಿಟರಿ ಗುರಿ ಸಾಧನೆ ಇಂತಹ ತಂತ್ರಗಾರಿಕೆ ಉದ್ಧೇಶ' ಎಂದೂ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries