ನವದೆಹಲಿ: ಪ್ರಸ್ತಾವಿತ ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ(ಬಿಟಿಎ) ಔಪಚಾರಿಕವಾಗಿ ಮಾತುಕತೆಗಳನ್ನು ಪ್ರಾರಂಭಿಸುವ ಮೊದಲು ಕೆಲವು ವಿಷಯಗಳ ಮೇಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಭಾರತೀಯ ಅಧಿಕಾರಿಗಳ ತಂಡವು ಮುಂದಿನ ವಾರ ವಾಷಿಂಗ್ಟನ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೆರಿಕದ ಉನ್ನತ ಮಟ್ಟದ ತಂಡವು ಭಾರತಕ್ಕೆ ಭೇಟಿ ನೀಡಿದ ಕೆಲವೇ ವಾರಗಳಲ್ಲಿ ಈ ಭೇಟಿ ನಡೆಯುತ್ತಿದ್ದು, ಬಿಟಿಎ ಕುರಿತ ಮಾತುಕತೆಗಳು ವೇಗ ಪಡೆಯುವುದನ್ನು ಸೂಚಿಸುತ್ತದೆ ಎಂದು ವರದಿ ತಿಳಿಸಿದೆ
ಭಾರತದ ಮುಖ್ಯ ಸಮಾಲೋಚಕ, ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಎರಡೂ ದೇಶಗಳ ನಡುವಿನ ಮೊದಲ ವೈಯಕ್ತಿಕ ಮಾತುಕತೆಗಾಗಿ ತಂಡವನ್ನು ಮುನ್ನಡೆಸುವ ನಿರೀಕ್ಷೆ ಇದೆ.
ಕಳೆದ ತಿಂಗಳು ಇಲ್ಲಿ ಎರಡೂ ದೇಶಗಳ ನಡುವೆ ನಡೆದ ಹಿರಿಯ ಅಧಿಕಾರಿಗಳ ಮಟ್ಟದ ಮಾತುಕತೆಗಳ ನಂತರ ಈ ಭೇಟಿ ಆಗುತ್ತಿದೆ. ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕದ ಸಹಾಯಕ ವ್ಯಾಪಾರ ಪ್ರತಿನಿಧಿ ಬ್ರೆಂಡನ್ ಲಿಂಚ್, ಭಾರತೀಯ ಅಧಿಕಾರಿಗಳೊಂದಿಗೆ ನಿರ್ಣಾಯಕ ವ್ಯಾಪಾರ ಚರ್ಚೆಗಳಿಗಾಗಿ ಮಾರ್ಚ್ 25ರಿಂದ 29ರವರೆಗೆ ಭಾರತದಲ್ಲಿದ್ದರು.
ಭಾರತದ ಅಧಿಕಾರಿಗಳ ತಂಡವು ಮುಂದಿನ ವಾರದ ಮಧ್ಯಭಾಗದಲ್ಲಿ ವಾಷಿಂಗ್ಟನ್‌ಗೆ ಭೇಟಿ ನೀಡಬಹುದು. ಬಿಟಿಎಗಾಗಿ ಔಪಚಾರಿಕ ಮಾತುಕತೆಗಳನ್ನು ಪ್ರಾರಂಭಿಸುವ ಮೊದಲು ಕೆಲವು ವಿಷಯಗಳ ಮೇಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಅವರು ಬಯಸುತ್ತಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಏಪ್ರಿಲ್ 9ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ 90 ದಿನಗಳ ಸುಂಕ ವಿರಾಮವನ್ನು ಮಾತುಕತೆಗೆ ಬಳಸಿಕೊಳ್ಳಲು ಉಭಯ ದೇಶಗಳು ಕಡೆಯವರು ಉತ್ಸುಕವಾಗಿವೆ.





