ನ್ಯೂಯಾರ್ಕ್: ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಅನುಸರಿಸುತ್ತಿರುವ ನೀತಿಯನ್ನು 100ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ವಿರೋಧಿಸಿದ್ದು, ಈ ಸಂಬಂಧ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಸರ್ಕಾರವು ನಮ್ಮ ಸ್ವಾತಂತ್ರ್ಯಕ್ಕೆ ಬೆದರಿಕೆವೊಡ್ಡುತ್ತಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯವು ಹೇಳಿಕೆ ನೀಡಿದ ಬೆನ್ನಲ್ಲೇ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಮತ್ತು ರಾಜಕೀಯ ಮುಖಂಡರ ಹಸ್ತಕ್ಷೇಪವನ್ನು ಖಂಡಿಸಿ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ಮೊದಲ ಬಾರಿಗೆ ಒಟ್ಟಿಗೆ ಧ್ವನಿ ಎತ್ತಿದ್ದಾರೆ.
'ಸುಧಾರಣೆಯನ್ನು ನಾವು ಸ್ವಾಗತಿಸುತ್ತೇವೆ. ಕಾನೂನು ಪ್ರಕಾರ ಮೇಲ್ವಿಚಾರಣೆ ಮಾಡಲು ನಮ್ಮ ವಿರೋಧವಿಲ್ಲ. ಆದರೆ, ಅನಗತ್ಯವಾಗಿ ಹಸ್ತಕ್ಷೇಪ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಈ ರೀತಿಯ ಹಸ್ತಕ್ಷೇಪವು ಉನ್ನತ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜಂಟಿ ಹೇಳಿಕೆ ಕುರಿತು ಶ್ವೇತ ಭವನ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.




