HEALTH TIPS

ಆಕೆಯ ಮೇಲಾದ ಅತ್ಯಾಚಾರಕ್ಕೆ ಅವಳೇ ಹೊಣೆ: ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್‌

ಅಲಹಾಬಾದ್: 'ಆಕೆ (ದೂರುದಾರಳು) ತನಗೆ ತಾನೇ ಸಂಕಷ್ಟ ತಂದುಕೊಂಡಿದ್ದಾಳೆ. ಆದ್ದರಿಂದ ಆಕೆಯ ಮೇಲಾದ ಅತ್ಯಾಚಾರಕ್ಕೆ ಅವಳೇ ಜವಾಬ್ದಾರಳು' ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡುವಾಗ ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಸಿಂಗ್‌ ವ್ಯಕ್ತಪಡಿಸಿದ ಅಭಿಪ್ರಾಯವಿದು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಪ್ರಕರಣ ನಡೆದಿತ್ತು. ನೊಯಿಡಾದ ಖ್ಯಾತ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿನಿಯು ತನ್ನ ಇಬ್ಬರು ಸ್ನೇಹಿತೆಯರ ಜೊತೆ ದೆಹಲಿಯಲ್ಲಿರುವ ಬಾರ್‌ವೊಂದಕ್ಕೆ ತೆರಳಿದ್ದರು. ವಿದ್ಯಾರ್ಥಿನಿಗೆ ಪರಿಚಯದ ವ್ಯಕ್ತಿಯೊಬ್ಬರು ಬಾರ್‌ನಲ್ಲಿ ಸಿಕ್ಕಿದ್ದರು.

'ನಾವು ಬೆಳಿಗ್ಗೆ 3 ಗಂಟೆಯವರೆಗೆ ಬಾರ್‌ನಲ್ಲಿಯೇ ಇದ್ದೆವು. 'ವಿಶ್ರಾಂತಿ' ಪಡೆಯಲು ತನ್ನ ಮನೆಗೆ ಬರುವಂತೆ ಆ ವ್ಯಕ್ತಿಯು ತುಂಬಾ ಒತ್ತಾಯಿಸಿದ. ಹಾಗಾಗಿ ಆತನ ಜೊತೆಗೆ ಹೋಗಲು ನಾನು ಒಪ್ಪಿಕೊಂಡೆ' ಎಂದು ವಿದ್ಯಾರ್ಥಿನಿಯು ದೂರಿನಲ್ಲಿ ವಿವರಿಸಿದ್ದಾರೆ.

'ಆತ ತನ್ನ ಮನೆಗೆ ನನ್ನನ್ನು ಕರೆದುಕೊಂಡು ಹೋಗುವ ಬದಲು ಗುರುಗ್ರಾಮದಲ್ಲಿರುವ ಆತನ ಸಂಬಂಧಿಕರ ಮನೆಯೊಂದಕ್ಕೆ ಕರೆದುಕೊಂಡು ಹೋದ. ಮನೆಗೆ ತೆರಳುವ ವೇಳೆ ನನ್ನನ್ನು ಅಶ್ಲೀಲವಾಗಿ ಮುಟ್ಟಿದ. ಮನೆಗೆ ತೆರಳಿದ ನಂತರ ಅತ್ಯಾಚಾರ ಎಸಗಿದ' ಎಂದು ಹೇಳಿದ್ದಾರೆ.

ಎಫ್‌ಐಆರ್‌ ದಾಖಲಾದ ಬಳಿಕ ವ್ಯಕ್ತಿಯನ್ನು 2024ರ ಡಿಸೆಂಬರ್‌ನಲ್ಲಿ ಬಂಧಿಸಲಾಗಿದೆ. 'ನಾನು ಆಕೆಯ ಮೇಲೆ ಅತ್ಯಾಚಾರ ಎಸಗಿಲ್ಲ. ನಮ್ಮಿಬ್ಬರ ನಡುವೆ ಒಪ್ಪಿತ ಲೈಂಗಿಕ ಕ್ರಿಯೆ ನಡೆದಿತ್ತು' ಎಂದು ಆರೋಪಿಯು ಪೊಲೀಸರಿಗೆ ತಿಳಿಸಿದ್ದಾರೆ.

'ಮಹಿಳೆಯರ ಸ್ತನಗಳನ್ನು ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರದ ಯತ್ನವಲ್ಲ' ಎಂದು ಇದೇ ಹೈಕೋರ್ಟ್‌ನ ಇನ್ನೊಬ್ಬ ನ್ಯಾಯಾಮೂರ್ತಿಯೊಬ್ಬರು ಈ ಹಿಂದೆ ತೀರ್ಪು ನೀಡಿದ್ದರು. ಇದು ಭಾರಿ ವಿವಾದವನ್ನೇ ಸೃಷ್ಟಿಸಿತ್ತು. ಬಳಿಕ ನ್ಯಾಯಮೂರ್ತಿಯ ಈ ಅಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು.

ನ್ಯಾಯಮೂರ್ತಿ ಹೇಳಿದ್ದೇನು?

  • ಸಂತ್ರಸ್ತೆಯ ಆರೋಪಗಳೆಲ್ಲವೂ ಸತ್ಯ ಎಂದು ಒಪ್ಪಿಕೊಂಡರೂ ಇದು ಆಕೆಯೇ ತಂದುಕೊಂಡ ಸಂಕಷ್ಟ ಎಂದೇ ಹೇಳಬೇಕಾಗುತ್ತದೆ. ತನ್ನ ಮೇಲಾದ ಅತ್ಯಾಚಾರಕ್ಕೆ ಆಕೆಯೇ ಹೊಣೆ. ಇದನ್ನೇ ಸಂತ್ರಸ್ತೆಯು ತನ್ನ ಹೇಳಿಕೆಯಲ್ಲಿಯೂ ಹೇಳಿದ್ದಾರೆ. 'ಕನ್ಯಾಪೊರೆ ಹರಿದಿದೆ. ಆದರೆ ಲೈಂಗಿಕ ದೌರ್ಜನ್ಯವಾಗಿಲ್ಲ' ಎಂದು ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರೇ ಹೇಳಿದ್ದಾರೆ

  • ಸಂತ್ರಸ್ತೆಯೇ ಹೇಳುವಂತೆ ಆಕೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ಆಕೆ ಏನು ಮಾಡುತ್ತಿದ್ದಾರೋ ಅದರ ನೈತಿಕತೆಯ ಬಗ್ಗೆ ಅರ್ಥ ಮಾಡಿಕೊಳ್ಳಲು ಶಕ್ತರಿದ್ದಾರೆ

  • ಪ್ರಕರಣದ ಸತ್ಯಾಸತ್ಯತೆಗಳು ಸಂದರ್ಭಗಳು ಅಪರಾಧದ ಸ್ವರೂಪ ಸಾಕ್ಷ್ಯಗಳನ್ನು ಗಮನಿಸಿದರೆ ಆರೋಪಿಗೆ ಜಾಮೀನು ನೀಡುಬಹುದು ಎನ್ನಿಸುತ್ತದೆ. ಆದ್ದರಿಂದ ಜಾಮೀನು ಅರ್ಜಿಯನ್ನು ಪುರಸ್ಕರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries