ತಿರುವನಂತಪುರ: ಕಳೆದ ವರ್ಷ ಕೇರಳದ ವಯನಾಡಿನಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಸಂತ್ರಸ್ತರಾಗಿರುವ ಜನರ ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರವು ದ್ರೋಹ ಬಗೆದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಗುರುವಾರ) ಆರೋಪಿಸಿದ್ದಾರೆ.
ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ಗೆ ಕೇಂದ್ರ ಸಲ್ಲಿಸಿದ್ದ ಅಫಿಡವಿಟ್ ಅನ್ನು ಉಲ್ಲೇಖಿಸಿ ವಯನಾಡಿನ ಸಂಸದೆಯೂ ಆಗಿರುವ ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ.
'ವಯನಾಡಿನ ಭೂಕುಸಿತದ ಸಂತ್ರಸ್ತರು ಮನೆಗಳು, ಜಮೀನು ಸೇರಿದಂತೆ ಜೀವನೋಪಾಯದ ಎಲ್ಲವನ್ನು ಕಳೆದುಕೊಂಡಿದ್ದಾರೆ. ಆದರೂ ಕೇಂದ್ರವು ಸಾಲ ಮನ್ನಾ ಮಾಡಲು ನಿರಾಕರಿಸುತ್ತಿದೆ. ಬದಲಾಗಿ ಸಾಲ ಮರು ಹೊಂದಾಣಿಕೆಗೆ ಅವಕಾಶ ನೀಡುತ್ತಿದೆ. ಇದು ಪರಿಹಾರವಲ್ಲ, ದ್ರೋಹ' ಎಂದು ಹೇಳಿದ್ದಾರೆ.
'ಕೇಂದ್ರದ ಈ ನಿಲುವನ್ನು ಬಲವಾಗಿ ಖಂಡಿಸುತ್ತೇವೆ. ವಯನಾಡಿನ ಸಹೋದರ ಸಹೋದರಿಯರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ಅವರ ನೋವಿಗೆ ದನಿಯಾಗಿ ನ್ಯಾಯ ಸಿಗುವವರೆಗೂ ಪ್ರತಿಯೊಂದು ವೇದಿಕೆಯಲ್ಲೂ ಹೋರಾಟ ನಡೆಸಲಾಗುವುದು' ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಕಳೆದ ವರ್ಷ ಜುಲೈ 30ರಂದು ವಯನಾಡಿನಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರಲ್ಲದೆ ನೂರೂರು ಮಂದಿ ಗಾಯಗೊಂಡಿದ್ದರು. ಈ ದುರಂತದಲ್ಲಿ 32 ಮಂದಿ ನಾಪತ್ತೆಯಾಗಿದ್ದರು.




