ಇಸ್ಲಾಮಾಬಾದ್: 'ಪಾಕಿಸ್ತಾನದ ಪಾಲಿಗೆ ಕಾಶ್ಮೀರವು ಕಂಠನಾಳವಿದ್ದಂತೆ (ತಲೆಯಿಂದ ಹೃದಯಕ್ಕೆ ರಕ್ತ ಒಯ್ಯುವ ನಾಳ). ಕಾಶ್ಮೀರ ಪಾಕಿಸ್ತಾನಕ್ಕೇ ಸೇರಿದ್ದು' ಎಂದು ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಹೇಳಿದ್ದಾರೆ.
'ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂಬುದು ನಮ್ಮ ಸ್ಪಷ್ಟ ನಿಲುವು.
ಅದನ್ನು ಪಾಕಿಸ್ತಾನಕ್ಕೆ ಸೇರಿಸುವ ಸಂಬಂಧ ವೀರೋಚಿತ ಹೋರಾಟ ನಡೆಸುತ್ತಿರುವ ನಮ್ಮ ಕಾಶ್ಮೀರಿ ಸಹೋದರರನ್ನು ನಾವು ಎಂದಿಗೂ ಕೈಬಿಡುವುದಿಲ್ಲ' ಎಂದು ಜನರಲ್ ಮುನೀರ್ ಹೇಳಿದ್ದಾರೆ. ಈ ಮಾತಿಗೆ ಭಾರತ ತಿರುಗೇಟು ನೀಡಿದೆ.
ಮಂಗಳವಾರ ಇಲ್ಲಿ ಆಯೋಜಿಸಿದ್ದ ಮೊದಲ 'ಸಾಗರೋತ್ತರ ಪಾಕಿಸ್ತಾನಿಗಳ ಸಮಾವೇಶ'ದಲ್ಲಿ ಜನರಲ್ ಮುನೀರ್ ಈ ಮಾತುಗಳನ್ನಾಡಿದ್ದಾರೆ.
'ಪ್ರತಿಯೊಂದು ವಿಚಾರದಲ್ಲಿಯೂ ಹಿಂದೂಗಳು ಮತ್ತು ಮುಸ್ಲಿಮರ ಮಧ್ಯೆ ಭಿನ್ನತೆ ಇತ್ತು ಎಂಬುದು ನಮ್ಮ ಪೂರ್ವಜರ ನಂಬಿಕೆಯಾಗಿತ್ತು. ದೇಶದ ಈ ಕಥೆಯನ್ನು ನಿಮ್ಮ ಮಕ್ಕಳಿಗೆ ತಿಳಿಸಿ' ಎಂದು ಕೋರಿದರು.
ಈ ಕಾರ್ಯಕ್ರಮದಲ್ಲಿ, ಪ್ರಧಾನಿ ಶೆಹಬಾಜ್ ಶರೀಫ್, ಹಿರಿಯ ಸಚಿವರು ಹಾಗೂ ವಿದೇಶಗಳಲ್ಲಿ ನೆಲಸಿರುವ ಪಾಕಿಸ್ತಾನ ಪ್ರಜೆಗಳು ಪಾಲ್ಗೊಂಡಿದ್ದರು.
'ಪಾಕಿಸ್ತಾನ ರಚನೆಯ ಉದ್ದೇಶವನ್ನು ನಿಮ್ಮ ಮಕ್ಕಳಿಗೆ ತಿಳಿಸಿ. ಪ್ರತಿಯೊಂದು ವಿಚಾರದಲ್ಲಿ ನಾವು ಹಿಂದೂಗಳಿಗಿಂತ ಬೇರೆ ಎಂಬುದು ನಮ್ಮ ಹಿರಿಯರ ಭಾವನೆಯಾಗಿತ್ತು ಎಂಬುದನ್ನು ನಿಮ್ಮ ಮಕ್ಕಳು ಮರೆಯುವುದಿಲ್ಲ' ಎಂದು ಹೇಳಿದ ಜನರಲ್ ಮುನೀರ್, ಎರಡು ದೇಶಗಳ ಸಿದ್ಧಾಂತ ಪ್ರತಿಪಾದಿಸಿದ್ದ ಎಂ.ಎ.ಜಿನ್ನಾ ಮಾತುಗಳನ್ನು ಉಲ್ಲೇಖಿಸಿದ್ದಾರೆ.
'ನಮ್ಮ ಧರ್ಮಗಳು ಬೇರೆ, ನಮ್ಮ ಪದ್ಧತಿಗಳು-ಸಂಪ್ರದಾಯಗಳು, ಆಚಾರ-ವಿಚಾರಗಳೂ ಬೇರೆ. ಅದೇ ರೀತಿ ನಮ್ಮ ಮಹತ್ವಾಕಾಂಕ್ಷೆಗಳು ಸಹ ಬೇರೆ. ಈ ಅಂಶಗಳೇ ಎರಡು ದೇಶ ಸಿದ್ಧಾಂತಕ್ಕೆ ತಳಹದಿಯಾಗಿದ್ದವು' ಎಂದೂ ಹೇಳಿದ್ದಾರೆ.
ಕಾಶ್ಮೀರ ತೆರವು ಮಾಡಲಿ: ಪಾಕ್‌ಗೆ ಭಾರತ ತಿರುಗೇಟು
ಕಾಶ್ಮೀರ ಕುರಿತು ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ನೀಡಿರುವ ಹೇಳಿಕೆಗೆ ಭಾರತ ಗುರುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. 'ತಾನು ಆಕ್ರಮಿಸಿಕೊಂಡಿರುವ ಭಾರತದ ಭೂಭಾಗವನ್ನು ಪಾಕಿಸ್ತಾನ ತೆರವು ಮಾಡಬೇಕು. ಇದೊಂದೇ ಅದು ಕಾಶ್ಮೀರದೊಂದಿಗೆ ಹೊಂದಿರುವ ಏಕೈಕ ಸಂಬಂಧ' ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ ಜೈಸ್ವಾಲ್ ತಿರುಗೇಟು ನೀಡಿದ್ದಾರೆ. 'ವಿದೇಶದ ಭೂಭಾಗವೊಂದು ಅದರ (ಪಾಕಿಸ್ತಾನ) ಕಂಠನಾಳ ಹೇಗಾಗುತ್ತದೆ? ಕಾಶ್ಮೀರವು ಭಾರತದ ಕೇಂದ್ರಾಡಳಿತ ಪ್ರದೇಶ' ಎಂದು ಜೈಸ್ವಾಲ್ ಹೇಳಿದ್ದಾರೆ. ಮುಂಬೈ ಮೇಲಿನ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾನಿಂದ ಅಂತರ ಕಾಯ್ದುಕೊಂಡಿರುವ ಪಾಕಿಸ್ತಾನದ ನಡೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜೈಸ್ವಾಲ್ 'ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಪಾಕಿಸ್ತಾನವೇ ಭಯೋತ್ಪಾದನೆಯ ಜಾಗತಿಕ ಕೇಂದ್ರ ಎಂಬ ಕುಖ್ಯಾತಿ ಹೋಗುವುದಿಲ್ಲ' ಎಂದು ಉತ್ತರಿಸಿದರು.




