ಢಾಕಾ: 1971ರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಪಾಕಿಸ್ತಾನ ಕ್ಷಮೆ ಕೋರಬೇಕು ಎಂದು ಬಾಂಗ್ಲಾದೇಶ ಒತ್ತಾಯಿಸಿದೆ.
ಗುರುವಾರ ನಡೆದ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಹಂತದ ಮಾತುಕತೆ ಸಂದರ್ಭದಲ್ಲಿ 'ಐತಿಹಾಸಿಕವಾಗಿ ಬಗೆಹರಿಯದ ಸಮಸ್ಯೆಗಳನ್ನು' ಬಾಂಗ್ಲಾದೇಶವು ಪ್ರಸ್ತಾಪಿಸಿತು.
ಪಾಕಿಸ್ತಾನ ವಿಭಜನೆಯಾಗಿ ಬಾಂಗ್ಲಾದೇಶ ಹೊಸದಾಗಿ ರಚನೆಯಾದ ಬಳಿಕ ತನಗೆ ದೊರೆಯಬೇಕಾಗಿದ್ದ ಒಟ್ಟಾರೆ ಆಸ್ತಿಯ ಮೌಲ್ಯ 4.3 ಶತಕೋಟಿ ಡಾಲರ್ (₹36 ಸಾವಿರ ಕೋಟಿ) ಮೊತ್ತವನ್ನು ಸಹ ಪಾವತಿಸಬೇಕು ಎಂದು ಅದು ಒತ್ತಾಯಿಸಿದೆ.
ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಜೊತೆಗೆ ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಜಶೀಂ ಉದ್ದಿನ್, 'ಪಾಕಿಸ್ತಾನದ ಜೊತೆಗಿನ ಚರ್ಚೆ ವೇಳೆ ಐತಿಹಾಸಿಕವಾಗಿ ಬಗೆಹರಿಯದ ವಿಚಾರಗಳು ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ' ಎಂದಿದ್ದಾರೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮಧ್ಯೆ ಸುಮಾರು 15 ವರ್ಷಗಳ ಬಳಿಕ ನಡೆದ ಮೊದಲ ಚರ್ಚೆ ಇದಾಗಿದೆ.




