HEALTH TIPS

Pahalgam Attack: 3,337 ಪ್ರವಾಸಿಗರ ಸ್ಥಳಾಂತರ

ನವದೆಹಲಿ: ಪಹಲ್ಗಾಮ್ ಬಳಿ ನಡೆದ ಉಗ್ರರ ದಾಳಿಯಿಂದ ಕಾಶ್ಮೀರದಲ್ಲಿ ಸಿಲುಕಿರುವ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿದೆ. ಶ್ರೀನಗರಕ್ಕೆ ಹೆಚ್ಚುವರಿ ವಿಮಾನಗಳ ಹಾರಾಟವೂ ಆರಂಭಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಬುಧವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ 20 ವಿಮಾನಗಳಲ್ಲಿ 3,337 ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.

ಇಂಡಿಗೊ, ಏರ್‌ ಇಂಡಿಯಾ ಮತ್ತು ಸ್ಪೈಸ್‌ಜೆಟ್‌ಗೆ ಸೇರಿದ ವಿಮಾನಗಳು ಪ್ರತಿದಿನ ಶ್ರೀನಗರಕ್ಕೆ ಹಾರಾಟ ನಡೆಸುತ್ತವೆ. ಇವುಗಳನ್ನು ಹೊರತುಪಡಿಸಿ ಈ ಕಂಪನಿಗಳಿಂದ ಹೆಚ್ಚುವರಿಯಾಗಿ ಏಳು ವಿಮಾನಗಳು ಕಾರ್ಯಾಚರಣೆ ನಡೆಸಿವೆ ಎಂದು ತಿಳಿಸಿದೆ.

ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ರದ್ದತಿ ಶುಲ್ಕಗಳಿಗೆ ವಿನಾಯಿತಿ ಅಥವಾ ಶುಲ್ಕಗಳನ್ನು ಮರುಹೊಂದಾಣಿಕೆ ಮಾಡಲಾಗುವುದು. ಟಿಕೆಟ್‌ ಬುಕಿಂಗ್ ರದ್ದುಪಡಿಸುವ ಪ್ರಯಾಣಿಕರಿಗೆ ಪೂರ್ಣವಾಗಿ ಹಣ ಹಿಂದಿರುಗಿಸಲಾಗುವುದು ಎಂದು ಇಂಡಿಗೊ, ಏರ್‌ ಇಂಡಿಯಾ, ಆಕಾಶಾ ಏರ್‌, ಸ್ಪೈಸ್‌ಜೆಟ್‌, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪನಿ ತಿಳಿಸಿವೆ.

'ಇಂತಹ ತುರ್ತು ಸಂದರ್ಭದಲ್ಲಿ ಟಿಕೆಟ್‌ ದರ ಏರಿಕೆ ಮಾಡುವುದಿಲ್ಲ. ದರವನ್ನು ಕಡಿಮೆ ಮಾಡಲಾಗಿದೆ. ಪ್ರತಿದಿನ ಕಂಪನಿಗೆ ಸೇರಿದ 20 ವಿಮಾನಗಳು ದೇಶದ ವಿವಿಧ ನಗರಗಳಿಂದ ಶ್ರೀನಗರಕ್ಕೆ ಹಾರಾಟ ನಡೆಸುತ್ತವೆ. ದೆಹಲಿ ಮತ್ತು ಮುಂಬೈನಿಂದ ಹೆಚ್ಚುವರಿ ವಿಮಾನಗಳ ಹಾರಾಟಕ್ಕೆ ಕ್ರಮವಹಿಸಲಾಗಿದೆ' ಎಂದು ಇಂಡಿಗೊ ತಿಳಿಸಿದೆ.

ಏರ್‌ ಇಂಡಿಯಾದಿಂದ ಪ್ರತಿದಿನ ದೆಹಲಿ ಮತ್ತು ಮುಂಬೈನಿಂದ ಐದು ವಿಮಾನಗಳು ಶ್ರೀನಗರಕ್ಕೆ ಹಾರಾಟ ನಡೆಸುತ್ತವೆ. ಸದ್ಯ ಈ ಎರಡು ನಿಲ್ದಾಣಗಳಿಂದ ಹೆಚ್ಚುವರಿಯಾಗಿ ತಲಾ ಒಂದು ವಿಮಾನವು ಕಾರ್ಯಾಚರಣೆ ಆರಂಭಿಸಿದೆ ಎಂದು ಏರ್‌ ಇಂಡಿಯಾ ತಿಳಿಸಿದೆ.

'ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯು ಅಲ್ಲಿನ ಪ್ರವಾಸೋದ್ಯಮದ ಮೇಲೆ ಅಲ್ಪಾವಧಿವರೆಗಷ್ಟೇ ಪರಿಣಾಮ ಬೀರಲಿದೆ. ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು' ಎಂದು ಭಾರತೀಯ ಪ್ರಯಾಣ ಏಜೆಂಟ್‌ಗಳ ಒಕ್ಕೂಟದ ಅಧ್ಯಕ್ಷ ಅಜಯ್ ಪ್ರಕಾಶ್‌ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries