HEALTH TIPS

Pahalgam Attack | ಕಾಶ್ಮೀರ ತೊರೆಯುತ್ತಿರುವ ಪ್ರವಾಸಿಗರು

ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿಯ ಬಳಿಕ ಸಾವಿರಾರು ಪ್ರವಾಸಿಗರು ಕಾಶ್ಮೀರ ತೊರೆದು, ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಪ್ರವಾಸಿಗರು ತಮ್ಮ ರಾಜ್ಯಗಳಿಗೆ ಸುರಕ್ಷಿತವಾಗಿ ಮರಳುವಂತೆ ಮಾಡಲು ಅಧಿಕಾರಿಗಳು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ.

'ನಮ್ಮ ಅತಿಥಿಗಳು ವಲಸೆ ಹೋಗುವುದನ್ನು ನೋಡಲು ಆಗದು. ಅದು ತೀವ್ರ ದುಃಖ ತರಿಸುತ್ತದೆ. ಆದರೆ ಅವರೇಕೆ ಹಿಂತಿರುಗಲು ಬಯಸುತ್ತಿದ್ದಾರೆ ಎಂಬುದನ್ನು ನಾವು ಅರಿತಿದ್ದೇವೆ' ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ.

'ಡಿಜಿಸಿಎ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವು ಹೆಚ್ಚುವರಿ ವಿಮಾನಗಳ ಸಂಚಾರಕ್ಕೆ ಕ್ರಮ ತೆಗೆದುಕೊಂಡಿದೆ. ಇದೇ ವೇಳೆ ಶ್ರೀನಗರ ಮತ್ತು ಜಮ್ಮು ನಡುವಿನ ರಾಷ್ಟ್ರೀಯ ಹೆದ್ದಾರಿ- 44 ಅನ್ನು ಸಂಚಾರಕ್ಕಾಗಿ ಮರುಸಂಪರ್ಕಿಸಲಾಗಿದೆ' ಎಂದು ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರವಾಸಿಗರ ಪರದಾಟ: ವಿಮಾನಯಾನ ದರಗಳು ಹೆಚ್ಚಿರುವುದರಿಂದ ತವರಿಗೆ ಮರಳಲು ಪ್ರವಾಸಿಗರು ಪರದಾಡುವಂತಾಗಿದೆ.

'ಶ್ರೀನಗರದಿಂದ ದೆಹಲಿಗೆ ವಿಮಾನಯಾನ ದರವನ್ನು ಒಬ್ಬರಿಗೆ ₹18,000ಕ್ಕೆ ಏರಿಸಲಾಗಿದೆ. ಹೀಗಾದರೆ ನಾವೆಲ್ಲ ಮನೆಗೆ ಹೇಗೆ ಹೋಗುವುದು' ಎಂದು ದೆಹಲಿಯ ಪ್ರವಾಸಿಗರಾದ ಅಂಚಲ್‌ ಮೆಹ್ತಾ ಪ್ರಶ್ನಿಸಿದರು.

ಬುಕಿಂಗ್‌ಗಳು ರದ್ದು:

'ದಾಳಿಯ ಬಳಿಕ ಆತಂಕಗೊಂಡಿರುವ ಜನರು, ಕಾಶ್ಮೀರ ಪ್ರವಾಸದ ಬುಕಿಂಗ್‌ಗಳನ್ನು ರದ್ದುಗೊಳಿಸುತ್ತಿದ್ದಾರೆ. ಈಗಾಗಲೇ ಶೇ 80ರಷ್ಟು ಬುಕಿಂಗ್‌ಗಳು ರದ್ದಾಗಿವೆ. ಅಲ್ಲದೆ ಮುಂದಿನ ತಿಂಗಳ ಪ್ಯಾಕೇಜ್‌ಗಳೂ ರದ್ದಾಗುತ್ತಿವೆ' ಎಂದು ಶ್ರೀನಗರದ ಪ್ರವಾಸ ನಿರ್ವಾಹಕ ಇಜಾಜ್‌ ಅಲಿ ಪ್ರತಿಕ್ರಿಯಿಸಿದ್ದಾರೆ.

'ಈಗ ಕಾಶ್ಮೀರ ಪ್ರವಾಸದಲ್ಲಿ ಇರುವವರು ಆತಂಕಗೊಂಡಿದ್ದು, ಹಲವರು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಹಲವಾರು ವರ್ಷಗಳಿಂದ ಮಾಡಿದ ಒಳ್ಳೆಯ ಕೆಲಸಗಳೆಲ್ಲ ವ್ಯರ್ಥವಾದಂತೆ ಆಗಿದೆ. ಪ್ರವಾಸಿಗರನ್ನು ಪುನಃ ಕಾಶ್ಮೀರಕ್ಕೆ ಕರೆತರಲು ಸಾಕಷ್ಟು ಮನವರಿಕೆ ಮಾಡಬೇಕಾಗುತ್ತದೆ' ಎಂದು ಅಲಿ ಹೇಳಿದ್ದಾರೆ.

ಶೇ 90ರಷ್ಟು ರದ್ದು:

ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರ ಪ್ರವಾಸಕ್ಕೆ ಬುಕಿಂಗ್‌ ಮಾಡಿದ್ದ ಪ್ರವಾಸಿಗರ ಪೈಕಿ ಶೇ 90ರಷ್ಟು ಜನರು ಸುರಕ್ಷತೆ ದೃಷ್ಟಿಯಿಂದ ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸಿದ್ದಾರೆೆ ಎಂದು ವಿವಿಧ ಟ್ರಾವೆಲ್‌ ಸಂಸ್ಥೆಗಳು ಹೇಳಿವೆ.

ವಾಸಿಗರ ಉತ್ಸಾಹ ಕುಂದಿಲ್ಲ

ಮುಂಬೈ: 'ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಸಾಮೂಹಿಕ ಹತ್ಯೆಯು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸ ಬೆಳೆಸುವವರ ಉತ್ಸಾಹವನ್ನು ಕುಂದಿಸಿಲ್ಲ' ಎಂದು ಮುಂಬೈನ ಪ್ರತಿಷ್ಠಿತ ಟ್ರಾವೆಲ್‌ ಕಂಪನಿಗಳಲ್ಲಿ ಒಂದಾದ ರಾಜಾ ರಾಣಿ ಟ್ರಾವೆಲ್ಸ್‌ ಲಿಮಿಟೆಡ್‌ನ ಮುಖ್ಯಸ್ಥ ಅಭಿಜೀತ್‌ ಪಾಟೀಲ್‌ ತಿಳಿಸಿದ್ದಾರೆ. 'ಈಗ ಪರಿಸ್ಥಿತಿ ಹಿಂದಿನಂತಿಲ್ಲ ಸಂಪೂರ್ಣ ಬದಲಾಗಿದೆ. ಜನರು ತಮ್ಮ ಪ್ರವಾಸವನ್ನು ಮುಂದುವರಿಸಲು ಬಯಸಿದ್ದಾರೆ ಮತ್ತು ಇಲ್ಲಿಯವರೆಗೆ ಯಾವುದೇ ಪ್ರವಾಸ ರದ್ದಾಗಿಲ್ಲ' ಎಂದು ಅವರು ಶ್ರೀನಗರದಿಂದ 'ಪ್ರಜಾವಾಣಿ' ಜತೆ ದೂರವಾಣಿ ಮೂಲಕ ಮಾತನಾಡಿದರು. 'ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಾರಾಷ್ಟ್ರ ಮತ್ತು ಗುಜರಾತಿನ ಸುಮಾರು 20000ದಿಂದ 25000 ಪ್ರವಾಸಿಗರು ಇದ್ದಾರೆ' ಎಂದು ಅವರು ಪ್ರತಿಕ್ರಿಯಿಸಿದರು. 'ರಾಜಾ ರಾಣಿ ಟ್ರಾವೆಲ್ಸ್‌ನಿಂದ ಸುಮಾರು 200ರಿಂದ 250 ಜನರು ನೇರವಾಗಿ ಬುಕಿಂಗ್‌ ಮಾಡಿದ್ದಾರೆ. ಅಲ್ಲದೆ ಇತರ ಟೂರ್‌ ಏಜೆನ್ಸಿ ಮತ್ತು ಕಂಪನಿಗಳಿಂದ ಬುಕಿಂಗ್‌ಗಳನ್ನು ನಾವು ನಿರ್ವಹಿಸುತ್ತೇವೆ' ಎಂದು ಅವರು ತಿಳಿಸಿದರು. ಪಾಟೀಲ್‌ ಅವರ ತಮ್ಮ ವಿಶ್ವಜೀತ್‌ ಪಾಟೀಲ್‌ ಅಧ್ಯಕ್ಷರಾಗಿರುವ ಮಹಾರಾಷ್ಟ್ರ ಪ್ರವಾಸ ಸಂಘಟಕರ ಸಂಘವು (ಎಂಟಿಒಎ) ಯಾವುದೇ ಪ್ರವಾಸವನ್ನು ರದ್ದುಪಡಿಸದಿರಲು ನಿರ್ಧಾರ ತೆಗೆದುಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries