ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ ಚೆಕ್‌ಪೋಸ್ಟ್ ಅನ್ನು ತಕ್ಷಣದಿಂದ ಮುಚ್ಚುವುದು, ಸಾರ್ಕ್ ವಿಸಾ ವಿನಾಯಿತಿ ಯೋಜನೆ ಪಾಕಿಸ್ತಾನದವರಿಗೆ ರದ್ದು, ರಾಯಭಾರ ಕಚೇರಿ ಸಿಬ್ಬಂದಿ ಹಂತಹಂತವಾಗಿ ಕಡಿತ ಸೇರಿದಂತೆ ಹಲವು ನಿರ್ಧಾರಗಳನ್ನು ಕೇಂದ್ರ ಸಂಪುಟ ಸಮಿತಿ ಬುಧವಾರ ತೆಗೆದುಕೊಂಡಿತು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಜನ ಮೃತಪಟ್ಟಿದ್ದರು. ಇದರ ಹೊಣೆಯನ್ನು 'ಕಾಶ್ಮೀರ್ ರೆಸಿಸ್ಟೆನ್ಸ್' ಹೊತ್ತುಕೊಂಡಿದ್ದು, ಇದು ಪಾಕಿಸ್ತಾನದ ಲಷ್ಕರ್ ಎ ತಯಬಾದ ಅಂಗ ಸಂಸ್ಥೆ ಎಂದೆನ್ನಲಾಗಿದೆ.
'ಭಯೋತ್ಪಾದನೆಗೆ ತಕ್ಕ ಪ್ರತ್ಯುತ್ತರ ನೀಡುವ ನಿಟ್ಟಿನಲ್ಲಿ ಬುಧವಾರ ನಡೆದ ಸಂಪುಟ ಸಮಿತಿ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯನ್ನು ಮುಚ್ಚಲು ಸಮಿತಿ ನಿರ್ಧರಿಸಿತು. ಜತೆಗೆ ಸೂಕ್ತ ದಾಖಲೆಯೊಂದಿಗೆ ಭಾರತ ಪ್ರವೇಶಿಸಿರುವ ಪಾಕಿಸ್ತಾನದ ಪ್ರಜೆಗಳು ದೇಶ ತೊರೆಯಲು ಮೇ 1ರ ಗಡುವು ನೀಡಲಾಗಿದೆ' ಎಂದು ತಿಳಿಸಿದ್ದಾರೆ.
'ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ಸಂಜೆ ಉನ್ನತ ಮಟ್ಟದ ಸಭೆ ನಡೆಯಿತು. ರಕ್ಷಣಾ ಇಲಾಖೆಯ ಮೂರೂ ಸೇನೆಗಳಿಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಭಾರತದಲ್ಲಿರುವ ಪಾಕಿಸ್ತಾನದ ಸೇನಾ ಪಡೆಗಳು ಭಾರತ ತೊರೆಯಲು ವಾರದ ಗಡುವು ನೀಡಲು ನಿರ್ಧರಿಸಲಾಗಿದೆ. ಸಿಂಧೂ ನದಿ ಒಪ್ಪಂದವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ' ಎಂದು ಮಿಸ್ರಿ ತಿಳಿಸಿದ್ದಾರೆ.




