ಶ್ರೀನಗರ: ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಕಣಿವೆಯಾದ್ಯಂತ ನೂರಾರು ಶಂಕಿತರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.
ದಾಳಿಕೋರರ ಶೋಧಕ್ಕೆ ಸೇನೆ, ಜಮ್ಮು- ಕಾಶ್ಮೀರ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಕಾಶ್ಮೀರದಾದ್ಯಂತ ತೀವ್ರ ಕಾರ್ಯಾಚರಣೆ ಕೈಗೊಂಡಿವೆ.
'ಘಟನೆಯ ತನಿಖೆಗೆ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಭಯೋತ್ಪಾದಕರಿಗೆ ನೆರವು ನೀಡಿದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಹಲವು ವ್ಯಕ್ತಿಗಳನ್ನು ಪ್ರಶ್ನಿಸಲಾಗಿದ್ದು, ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದೇವೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಉಗ್ರರಿಗೆ ಭೂಗತವಾಗಿ ನೆರವಾಗುವ ಶಂಕಿತರು, ಸಹಾನುಭೂತಿ ಹೊಂದಿರುವವರು ಮತ್ತು ಉಗ್ರ ಚಟುವಟಿಕೆಗಳ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದೇವೆ' ಎಂದು ಅವರು ಮಾಹಿತಿ ನೀಡಿದ್ದಾರೆ.




