ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಹೆಸರಿನಲ್ಲಿ ಯುವಜನರು ಬೆಟ್ಟಿಂಗ್ ಹಾಗೂ ಜೂಜಾಡುತ್ತಿರುವುದು ಗಂಭೀರ ಸಮಸ್ಯೆಯಾಗಿದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಮೇಲೆ ನಿಯಂತ್ರಣ ತರಬೇಕು ಎಂದು ಕೆ.ಎ.ಪೌಲ್ ಅವರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನ್ಯಾ.ಸೂರ್ಯಕಾಂತ್ ಹಾಗೂ ನ್ಯಾ. ಎನ್. ಕೋಟೀಶ್ವರ್ ಸಿಂಗ್ ಪೀಠವು ಐಪಿಎಲ್ ಕುರಿತು ಮಾತನಾಡಿದೆ.
ಸಾಮಾಜಿಕ ಜಾಲತಾಣಗಳ ಪ್ರಭಾವಿಗಳು, ನಟರು, ಕ್ರಿಕೆಟಿಗರು ಈ ರೀತಿಯ ಆನ್‌ಲೈನ್ ಅಪ್ಲಿಕೇಶನ್‌ಗಳನ್ನು ಬಳಸುವಂತೆ ಜಾಹಿರಾತು ನೀಡುತ್ತಿರುವುದು ಮಕ್ಕಳನ್ನು ದಾರಿ ತಪ್ಪಿಸುತ್ತಿದೆ. ಸಿಗರೇಟ್ ಪ್ಯಾಕ್‌ನ ಮೇಲೆ ಧೂಮಪಾನದ ಕುರಿತು ಎಚ್ಚರಿಕೆಯಾದರೂ ಇರುತ್ತದೆ. ಆದರೆ, ಬೆಟ್ಟಿಂಗ್ ಅಪ್ಲಿಕೇಶನ್‌ಗಳಲ್ಲಿ ಯಾವುದೇ ಸೂಚನೆ ಇರುವುದಿಲ್ಲ. ಅಷ್ಟೇ ಅಲ್ಲದೇ, ಮಾಜಿ ಕ್ರಿಕೆಟಿಗರು ಕೂಡ ಇವುಗಳ ಪ್ರಚಾರ ಮಾಡುತ್ತಿದ್ದಾರೆ ಎಂದು ಪಿಐಎಲ್ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಬೆಟ್ಟಿಂಗ್ ಅಪ್ಲಿಕೇಶನ್‌ಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ತೆಲಂಗಾಣವೊಂದರಲ್ಲೇ 1,023 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 25ಕ್ಕೂ ಅಧಿಕ ಬಾಲಿವುಡ್ ಹಾಗೂ ಟಾಲಿವುಡ್ ನಟರು ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಪ್ರಚಾರ ಮಾಡುವ ಮೂಲಕ ಅಮಾಯಕರ ಸಾವಿಗೆ ಕಾರಣವಾಗಿದ್ದಾರೆ ಎಂದು ಕೆ.ಎ.ಪೌಲ್ ಆರೋಪಿಸಿದ್ದಾರೆ.
ಇತ್ತೀಚೆಗೆ ನಾವು ನಮ್ಮ ಮಕ್ಕಳಿಗೆ ಅಂತರ್ಜಾಲ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದು, ಅವರು ಅದನ್ನು ಶಾಲೆಯಲ್ಲೂ ಉಪಯೋಗಿಸುತ್ತಾರೆ. ಅದರ ಮೇಲೆ ಸಂಪೂರ್ಣ ನಿಗವಿಡಲು ಹಾಗೂ ಕಾನೂನಿನ ಮೂಲಕ ವೈಯಕ್ತಿಕವಾಗಿ ಬೆಟ್ಟಿಂಗ್ ನಿಲ್ಲಿಸಲು ಸಾಧ್ಯವಿಲ್ಲ. ಇದು ಸಮಾಜದ ನೈತಿಕ ಪತನವಾಗಿದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಾಡುವ ಅಪ್ಲಿಕೇಶನ್‌ಗಳ ವ್ಯಸನದಿಂದ ಹಲವು ಮಕ್ಕಳು ಮೃತಪಟ್ಟಿದ್ದು, ಇದರ ನಿಯಂತ್ರಣಕ್ಕೆ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯ ಪೀಠವು ಆದೇಶಿಸಿದೆ.




