ಕಾಸರಗೋಡು: ಕೇರಳ ಸರ್ಕಾರವು ಎಲ್ಲಾ ವಲಯಗಳಲ್ಲಿ ಅಭಿವೃದ್ಧಿಯನ್ನು ಸಾಧ್ಯವಾಗಿಸಿರುವುದಾಗಿ ಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಖಾತೆ ಸಚಿವ ಒ.ಆರ್.ಕೇಳು ತಿಳಿಸಿದ್ದಾರೆ.
ಅವರು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನ ಅಂಗವಾಗಿ ನೀಲೇಶ್ವರ ಚಿರಪ್ಪುರಂನಲ್ಲಿ ನಿರ್ಮಿಸಲಾಗಿರುವ ಬಡ್ಸ್ ಶಾಲೆಯ ಹೊಸ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಒಬ್ಬ ವ್ಯಕ್ತಿಯೂ ಹಸಿವಿನಿಂದ ಬಳಲಬಾರದು ಎಂಬ ಸರ್ಕಾರದ ನೀತಿಯ ಭಾಗವಾಗಿ ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸರ್ಕಾರ ಮುಂದುವರಿಯುತ್ತಿದೆ. ಕೇರಳವು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಎಲ್ಲಾ ಜನರಿಗೆ ಆದಾಯ ಒದಗಿಸಲು ಸೂಕ್ಷ್ಮ ಉದ್ಯಮ ಯೋಜನೆಯನ್ನು ಪ್ರಾರಂಭಿಸಿದೆ. ಓಖಿ, ನಿಫಾ, ಕೋವಿಡ್, ಪ್ರವಾಹ ಮುಂತಾದ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ. ಸರ್ಕಾರವು ಬಡ್ಸ್ ಶಾಲೆಯ ಮಕ್ಕಳ ಬಗ್ಗೆಯೂ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದು, ಕೇರಳ ಸರ್ಕಾರ ಎಲ್ಲಾ ಪಂಚಾಯಿತಿ ಮತ್ತು ನಗರಸಭಾ ವ್ಯಾಪ್ತಿಯಲ್ಲಿ ಬಡ್ಸ್ ಶಾಲೆಗಳನ್ನು ಪ್ರಾರಂಭಿಸುತ್ತಿದೆ ಎಂದು ಸಚಿವರು ಹೇಳಿದರು.
ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಎಂಜಿನಿಯರ್ ಪಿ.ಸಾಜು ವರದಿ ಮಂಡಿಸಿದರು. ನೀಲೇಶ್ವರ ನಗರಸಭಾ ಉಪಾಧ್ಯಕ್ಷ ಪಿ.ಪಿ. ಮಹಮ್ಮದ್ ರಫಿ,ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಕೆ.ಪಿ. ರವೀಂದ್ರನ್, ಶಂಸುದ್ದೀನ್ ಅರಿಂಜಿರ, ವಿ.ಗೌರಿ, ಲತಾ, ಪಿ.ಭಾರ್ಗವಿ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ವಿ.ಚಂದ್ರನ್, ಕೌನ್ಸಿಲರ್‍ಗಳಾದ ಇ.ಅಶ್ವತಿ, ಕೆ.ಜಯಶ್ರೀ, ದಾಕ್ಷಾಯಣಿ ಕುಞÂಕಣ್ಣನ್, ವಿ.ವಿ. ಶ್ರೀಜಾ, ರಾಜಕೀಯ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ ಸ್ವಾಗತಿಸಿದರು. ನಗರಸಭಾ ಕಾರ್ಯದರ್ಶಿ ಕೆ. ಮನೋಜ್ ಕುಮಾರ್ ವಂದಿಸಿದರು.



