ಕಾಸರಗೋಡು: ಶಾಲೆ ಪುನಾರಂಭಗೊಳ್ಳಲು ಕೆಲವೇ ದಿವಸ ಬಾಕಿ ಉಳಿದಿರುವಂತೆ ಶಿಕ್ಷಣ ಸಚಿವರ ದಿನಕ್ಕೊಂದು ರೀತಿಯ ನಿರ್ದೇಶನ ಶಾಲಾ ಅಧಿಕಾರಿಗಳು ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದೆ. ಶಾಲಾ ಪ್ರವೇಶ ಶುಲ್ಕಕ್ಕೆ ಸಂಬಂಧಿಸಿದಂತೆ ಸಚಿವರ ಹೇಳಿಕೆಯನ್ನು ವಿರೋಧಿಸಿ ಜಿಲ್ಲೆಯ ಕೆಲವೊಂದು ಪಿಟಿಎ ಸಮಿತಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಹೋರಾಟಕ್ಕೂ ಮುಂದಾಗಿವೆ. ಶಾಲೆ ತೆರೆಯುವ ವಿಷಯದಲ್ಲಿ ಪಿಟಿಎಗೆ ಬಹಳಷ್ಟು ಜವಾಬ್ದಾರಿಗಳಿದ್ದು, ಅವುಗಳಲ್ಲಿ ನಿರ್ವಹಣಾ ಕೆಲಸ ಮುಖ್ಯವಾಗಿದೆ. ಇದಕ್ಕೆ ಒಂದಷ್ಟು ಹಣ ಖರ್ಚಾಗುತ್ತದೆ. ಇದು ವಿದ್ಯಾರ್ಥಿಗಳ ಹೆತ್ತವರಿಂದ ಸಂಗ್ರಹಿಸುವ ಸಣ್ಣ ಮೊತ್ತದಿಂದ ಬಳಸಿಕೊಳ್ಳಬೇಕಾಗುತ್ತಿದೆ. ಪಿಟಿಎ ಸಭೆಯಲ್ಲಿ ಈ ಬಗ್ಗೆ ಹೆತ್ತವರ ಅಂಗೀಕಾರದೊಂದಿಗೆ ಹಣ ಸಂಗ್ರಹಿಸುತ್ತಿದ್ದರೂ, ಶಿಕ್ಷಣ ಸಚಿವರು ಹಣ ವಸೂಲಿ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಕೆಲವೊಂದು ಚಟುವಟಿಕೆಗಳಿಗೆ ಧಕ್ಕೆಯುಂಟಾಗುತ್ತಿದೆ ಎಂಬುದಗಿ ಪಿಟಿಎ ಸಮಿತಿಗಳು ಅಳಲು ತೋಡಿಕೊಂಡಿದೆ.
ಈ ಹಿಂದೆ ಮಕ್ಕಳನ್ನು ಶಾಲೆಗೆ ಸೇರ್ಪಡೆಗೊಳಿಸುವ ಸಂದರ್ಭ ಶಾಲೆಯಲ್ಲಿನ ದೈನಂದಿನ ಸಣ್ಣಪುಟ್ಟ ಖರ್ಚುವೆಚ್ಚಗಳಿಗಾಗಿ ಪಿಟಿಎ ಮೂಲಕ ಹಣ ಸಂಗ್ರಹಿಸಲಾಗುತ್ತಿತ್ತು. ಶಾಲೆಯ ಶೌಚಗೃಹ, ನೀರಿನ ಟ್ಯಾಂಕ್, ಶಾಲಾ ಆವರಣಗಳ ಶುಚಿಗೊಳಿಸುವಿಕೆ, ಬೀಳುವ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸುವುದು, ರಾತ್ರಿ ವೇಳೆ ಸಮಾಜಘಾತುಕ ಶಕ್ತಿಗಳಿಂದ Åಂಟಾಗುವ ಹಾಣಿಗಳ ದುರಸ್ತಿ, ತರಗತಿ ಕೊಠಡಿಗಳಿಗೆ ಬಣ್ಣ ಬಳಿಯುವುದು ಮತ್ತು ಸುಂದರಗೊಳಿಸುವುದು, ಫ್ಯಾನ್, ಲೈಟ್ ಮತ್ತು ವೈರಿಂಗ್ ಕೆಲಸಗಳ ನಿರ್ವಹಣೆಗೆ ಈ ರೀತಿಯ ಸಣ್ಣ ಮೊತ್ತದ ಸಂಗ್ರಹ ಅನಿವಾರ್ಯವಾಗುತ್ತಿದೆ. ವಿದ್ಯಾರ್ಥಿಗಳು ಶಾಲಾ ವಠಾರದಲ್ಲಿ ಬಿದ್ದು ಅಥವಾ ಇತರ ಯಾವುದೇ ರೀತಿಯಲ್ಲಿ ಗಾಯಗೊಂಡರೆ ಅವರಿಗೆ ಚಿಕಿತ್ಸೆ ನೀಡಲು, ವಿದ್ಯುತ್ ಬಿಲ್ ಪಾವತಿ ಮುಂತಾದ ವಿಷಯಗಳಿಗೆ ಪಿಟಿಎ ಫಂಡ್ ಬಳಸಿಕೊಂಡು ಬರಲಾಗುತ್ತಿದೆ. ಇಮತಹ ಸನ್ನಿವೇಶದಲ್ಲಿ ಪಿಟಿಎ ಹಣ ಸಂಗ್ರಹಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ತರವಲ್ಲ ಎಂಬುದಗಿ ಕೆಲವೊಂದು ಪಿಟಿಎ ಸಮಿತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದೆ.

