ಉಪ್ಪಳ: ತೀವ್ರ ಮಳೆಯ ಕಾರಣ ಜಿಲ್ಲೆಯಾದ್ಯಂತ ಭಾರೀ ಅವಾಂತರಗಳು ಸೃಷ್ಟಿಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮೊದಲೇ ಸಂಚಾರ ಸಂಕಷ್ಟದಲ್ಲಿರುವ ಪೈವಳಿಕೆ ಲಾಲ್ ಭಾಗ್ ನಿಂದ ಕುರುಡಪದವಿಗೆ ಸಂಚರಿಸುವ 8 ಕಿಲೋಮೀಟರ್ ವ್ಯಾಪ್ತಿಯ ರಸ್ತೆ ಶುಕ್ರವಾರ ಸಂಪೂರ್ಣ ಸಂಪರ್ಕ ಕಳಕೊಂಡ ವಿದ್ಯಮಾನ ವರದಿಯಾಗಿದೆ.
ಚಿಪ್ಪಾರು ಅಡ್ಕತ್ತಿಮಾರ್ ಸಮೀಪದ ಖಂಡಿಗೆ ತಿರುವೊಂದರಲ್ಲಿ ರಸ್ತೆಗೆ ಪಕ್ಕದ ಗುಡ್ಡ ಕುಸಿದು ವಾಹನ ಸಂಚಾರ ಮೊಟಕುಗೊಂಡಿತು. ಜೊತೆಗೆ ಶಿರಂತ್ತಡ್ಕ ಪರಿಸರದಲ್ಲಿ ವಿದ್ಯುತ್ ಕಂಬಗಳು ಬಹುತೇಕ ಧರಾಶಾಯಿಯಾಗಿದ್ದು, ಹಲವು ವಾಲಿ ನಿಂತಿವೆ. ವಿದ್ಯುತ್ ಸಂಪರ್ಕ ವಿಚ್ಛೇದಿಸಲ್ಪಟ್ಟಿರುವುದರಿಂದ ಅಪಾಯದ ಸಾಧ್ಯತೆಯೊಂದಿಲ್ಲದೆ ಪಾರಾಗಲಾಗಿದೆ. ಆದರೆ ಜನರು ಬಿರುಮಳೆ ಹಾಗೂ ಕಪ್ಪಿಟ್ಟಿರುವ ವಾತಾವರಣದ ಮಧ್ಯೆ ವಿದ್ಯುತ್ ಇಲ್ಲದೆ ಮುಂದಿನ ದಿನಗಳನ್ನು ಕಳೆಯುವ ದಾರಿಗಾಣದೆ ಕಂಗಾಲಾಗಿದ್ದಾರೆ.
ಖಂಡಿಗೆ ಪರಿಸರದಲ್ಲಿ ಕುಸಿದಿರುವ ಗುಡ್ಡೆಯ ಮಣ್ಣನ್ನು ತೆಗೆಯುವ ಕಾರ್ಯಾಚರಣೆ ಪ್ರಗತಿಯಲ್ಲಿದ್ದರೂ ಬಸ್ ಸಹಿತ ವಾಹನ ಸಂಚಾರ ಸದ್ಯ ಸಾಧ್ಯವಾಗದೆಂಬ ಮಾಹಿತಿಗಳು ಹೊರಬಿದ್ದಿದೆ.




