HEALTH TIPS

Operation Sindoor: ಕಲ್ಲಿ ತಾಂಡಾದ ಹೆಮ್ಮೆಯ ಮಗನಿಗೆ ಕಣ್ಣೀರಿನ ವಿದಾಯ

 ಲ್ಲಿ ತಾಂಡಾ : ಗಡಿಯಲ್ಲಿ ಪಾಕಿಸ್ತಾನದ ಜೊತೆ ಗುಂಡಿನ ಕಾಳಗದಲ್ಲಿ ವೀರ ಮರಣ ಹೊಂದಿದ ಹುತಾತ್ಮ ಯೋಧ ಎಂ.ಮುರಳಿ ನಾಯ್ಕ್ (25) ಪಾರ್ಥೀವ ಶರೀರವನ್ನು ಶನಿವಾರ ರಾತ್ರಿ ಸ್ವಗ್ರಾಮ ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಗೋರಂಟ್ಲ ಬಳಿಯ ಕಲ್ಲಿ ತಾಂಡಾಕ್ಕೆ ತರಲಾಗಿತ್ತು.

ದೇವನಹಲ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮೂಲಕ ಮೆರವಣಿಗೆಯಲ್ಲಿ ತರಲಾಗಿದ್ದ ಪಾರ್ಥೀವ ಶರೀರಕ್ಕೆ ಬಾಗೇಪಲ್ಲಿಯ ಟೋಲ್‍ ಪ್ಲಾಜಾದಲ್ಲಿ ಆಂಧ್ರ ಪ್ರದೇಶದ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಪುಷ್ಪಗುಚ್ಛ ಅರ್ಪಿಸಿ ಮೆರವಣಿಗೆಯಲ್ಲಿ ಕೊಂಡೊಯ್ದರು.


ರಾತ್ರಿಯಾದರೂ ರಸ್ತೆ, ಗ್ರಾಮಗಳಲ್ಲಿ ಜನರು ಕಾಯ್ದು ನಿಂತು ಗೌರವ ಸಲ್ಲಿಸಿದರು. ಶನಿವಾರ ರಾತ್ರಿ ಮೆರವಣಿಗೆ ಕಲ್ಲಿ ತಾಂಡಾ ತಲುಪಿತು. ಪಾರ್ಥೀವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಮಗನನ್ನು ಕಳೆದುಕೊಂಡ ತಾಯಿ ಜ್ಯೋತಿಬಾಯಿ, ತಂದೆ ಶ್ರೀರಾಮ ನಾಯ್ಕ್‌ ಅವರ ದುಃಖದ ಕಟ್ಟೆಯೊಡೆಯಿತು. ಗ್ರಾಮದ ಹೆಮ್ಮೆಯ ಪುತ್ರನನ್ನು ದೇಶಕ್ಕಾಗಿ ಸಮರ್ಪಿಸಿದ ಹೆಮ್ಮೆ ವ್ಯಕ್ತಪಡಿಸಿದ ಗ್ರಾಮಸ್ಥರು ಕಣ್ಣೀರು ಸುರಿಸಿದರು.

ಮುರಳಿ ನಾಯ್ಕ್ ಹುತಾತ್ಮರಾದ ಸುದ್ದಿ ಕೇಳಿದ ದಿನದಿಂದ ಕಲ್ಲಿ ತಾಂಡಾದಲ್ಲಿ ನೀರವ ಮೌನ ಹಾಗೂ ಸೂತಕದ ಛಾಯೆ ಆವರಿಸಿತ್ತು.

ಭಾನುವಾರ ಬೆಳಗ್ಗೆ ಮನೆಯ ಮುಂದೆ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಆಂಧ್ರ ಪ್ರದೇಶ, ನೆರೆಯ ಕರ್ನಾಟಕದ ಗಡಿ ಗ್ರಾಮಗಳಿಂದಲೂ ಸಾವಿರಾರು ಜನರು ವೀರ ಯೋಧನ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದರು.

ಎಲ್ಲರ ಕೈಯಲ್ಲೂ ತ್ರಿವರ್ಣ ಧ್ವಜಗಳಿದ್ದವು. ಕಣ್ಣಂಚಲ್ಲಿ ನೀರಿತ್ತು. ಎಲ್ಲರ ಹೃದಯ ಭಾರವಾಗಿದ್ದವು. 'ಮುರಳಿ ನಾಯ್ಕ್‌ ಅಮರ್ ರಹೆ' ಘೋಷಣೆಗಳು ಮುಗಿಲು ಮುಟ್ಟಿದ್ದವು. ತೆಲುಗಿನ ದೇಶಭಕ್ತಿ ಗೀತೆಗಳು ಎಲ್ಲರ ಹೃದಯಗಳನ್ನು ಆದ್ರಗೊಳಿಸಿದ್ದವು.

ಆಂಧ್ರ ಪ್ರದೇಶ ಸರ್ಕಾರದ ವತಿಯಿಂದ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌, ಮುಖ್ಯಮಂತ್ರಿ ಮಗ ಹಾಗೂ ಸಚಿವ ನಾರಾ ಲೋಕೇಶ್‌, ಸಚಿವೆ ಸುನಿತಮ್ಮ, ಶ್ರೀ ಸತ್ಯಸಾಯಿ ಜಿಲ್ಲಾಧಿಕಾರಿ ಟಿ.ಎಸ್‌. ಚೇತನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರತ್ನಾ, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಸೇನಾಧಿಕಾರಿಗಳು ಅಂತಿಮ ದರ್ಶನ ಪಡೆದರು. ಗ್ರಾಮಸ್ಥರು ಸಾಲಿನಲ್ಲಿ ನಿಂತು ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.

ನಂತರ ಗ್ರಾಮದಲ್ಲಿ ಮಿಲಿಟರಿ ಹಾಗೂ ಪೊಲೀಸರ ಕವಾಯತುಗಳೊಂದಿಗೆ ಪಾರ್ಥೀವ ಶರೀರದ ಮೆರವಣಿಗೆ ಹೊರಟಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಹೂಮಳೆಗರೆದರು.

ಸೇನಾ ಸಿಬ್ಬಂದಿ ಮತ್ತು ಪೊಲೀಸರು ಬ್ಯಾಂಡ್‌ ನುಡಿಸಿದರು. ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಿದರು. ಪಾರ್ಥೀವ ಶರೀರದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಮಡಿಚಿ ಮುರುಳಿ ನಾಯ್ಕ್‌ ಪೋಷಕರಿಗೆ ಹಸ್ತಾಂತರಿಸಿದರು. ಈ ದೃಶ್ಯ ಕಂಡು ನೆರೆದಿದ್ದ ಎಲ್ಲರೂ ಭಾವುಕರಾದರು. ಕುಟುಂಬ ಸದಸ್ಯರು ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿದರು. ಸಾವಿರಾರು ಜನರು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. 'ಮುರಳಿ ನಾಯಕ್‌ ಅಮರ್‌ ರಹೆ' ಘೋಷಣೆಗಳು ಮುಗಿಲು ಮುಟ್ಟಿದವು.

ದೇಶಕ್ಕಾಗಿ ಕಾದಾಡಿ ವೀರಮರಣ ಹೊಂದಿದ ಗ್ರಾಮದ ಹೆಮ್ಮೆಯ ಕುವರನನ್ನು ಕಳೆದುಕೊಂಡ ಜನರು ಭಾರವಾದ ಹೃದಯಗಳೊಂದಿಗೆ ಮರಳಿ ಹೆಜ್ಜೆ ಹಾಕಿದರು...

ಇದ್ದ ಒಬ್ಬನೇ ಮಗನನ್ನು ದೇಶಕ್ಕಾಗಿ ಕೊಟ್ಟರು

ಆಂಧ್ರಪ್ರದೇಶದ ಗೋರಂಟ್ಲಗೆ ಮೂರು ಕಿಲೋ ಮೀಟರ್ ದೂರದಲ್ಲಿರುವ ಕಲ್ಲಿ ತಾಂಡಾದಲ್ಲಿ 15 ಲಂಬಾಣಿ ಕುಟುಂಬ ಇವೆ. ಬಹುತೇಕರು ಕೃಷಿ, ಕೂಲಿಕಾರ್ಮಿಕರು. ತಾಂಡದ ಶ್ರೀರಾಮ ನಾಯ್ಕ್‌ ಹಾಗೂ ಜ್ಯೋತಿಬಾಯಿ ಅವರ ಏಕೈಕ ಪುತ್ರನೇ ಮುರಳಿ ನಾಯ್ಕ್‌. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬ ಈಗ ಕಂಗಾಲಾಗಿದೆ.

ಸೋಮಂದೆಪಲ್ಲಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮುರುಳಿ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ ನಂತರ ಸೇನೆ ಸೇರಿದ್ದರು.

ಸೇನೆ ಸೇರುವುದು ಮುರುಳಿ ಬಾಲ್ಯದ ಕನಸಾಗಿತ್ತು. ಗ್ರಾಮದ 20ಕ್ಕೂ ಸಂಬಂಧಿಕರು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ನೋಡಿ ತಾನೂ ಭಾರತೀಯ ಸೇನೆ ಸೇರಬೇಕು ಎಂದು 2022ರಲ್ಲಿ ಸೇನೆ ಸೇರಿದ್ದರು.

ಅಪ್ಪ, ಅಮ್ಮನಿಗೆ ಗೊತ್ತಾಗೋದು ಬೇಡ....

ಮೇ 7ರಂದು ಗಡಿಯಿಂದ ಸಂಬಂಧಿಕರಿಗೆ ವಿಡಿಯೊ ಕರೆ ಮಾಡಿದ್ದ ಮುರಳಿ ನಾಯ್ಕ್‌, ಗಡಿಯಲ್ಲಿ ಅಪರೇಷನ್ ಸಿಂಧೂರ ಆರಂಭವಾಗಿದೆ. ಗುಂಡಿನ ಚಕಮಕಿ ಹೆಚ್ಚಾಗಿದ್ದು ಯುದ್ಧದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದರು.

ಈ ವಿಷಯ ಅಪ್ಪ, ಅಮ್ಮನಿಗೆ ಗೊತ್ತಾಗುವುದು ಬೇಡ. ಗೊತ್ತಾದರೆ ಅವರು ಗಾಬರಿಯಾಗುತ್ತಾರೆ. ಹಾಗಾಗಿ ಯಾರೂ ಅವರಿಗೆ ತಿಳಿಸಬೇಡಿ ಎಂದು ಪದೇ ಪದೇ ಹೇಳಿದ್ದ. ಮೇ 9ರಂದು ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಮುರಳಿ ಹುತಾತ್ಮನಾದ ಎಂದು ಸಂಬಂಧಿಕರೊಬ್ಬರು ಕಣ್ಣೀರಾದರು.

 ಹುತ್ಮಾತ ಯೋಧನಿಗೆ ಕಣ್ಣೀರಿನ ಅಂತಿಮ ವಿದಾಯ ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಂದೆ ಶ್ರೀರಾಮನಾಯ್ಕ್‌ ತಾಯಿ ಜ್ಯೋತಿಬಾಯಿ ಅವರ ಭಾವುಕ ಕ್ಷಣ ಅಂತ್ಯಕ್ರಿಯೆಗೆ ಸಾಕ್ಷಿಯಾದ ಗ್ರಾಮಸ್ಥರು ಹುತಾತ್ಮ ಮುರಳಿ ನಾಯ್ಕ್‌ ಪಾರ್ಥೀವ ಶರೀರ ಗ್ರಾಮದಲ್ಲಿ ಮೆರವಣಿಗೆ

ಪಾರ್ಥಿವ ಶರೀರದ ಮುಂದೆ ಕುಟುಂಬಸ್ಥರ ಅಕ್ರಂದನ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries