ನವದೆಹಲಿ; ದಾನ ಮಾಡಿದ ಅಂಗಗಳಾದ ಒಂದು ಯಕೃತ್ತು ಮತ್ತು ಎರಡು ಮೂತ್ರಪಿಂಡಗಳನ್ನು ಪುಣೆಯ ಕಮಾಂಡ್ ಆಸ್ಪತ್ರೆಯಿಂದ ದೆಹಲಿಯ ಸೇನಾ ಆಸ್ಪತ್ರೆಗೆ ವಿಮಾನದ ಮೂಲಕ ಸಾಗಿಸುವ ಕಾರ್ಯವನ್ನು ಐಎಎಫ್ ಮತ್ತು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು ರಾತ್ರಿಯಿಡೀ ಕ್ಷಿಪ್ರವಾಗಿ ನಿರ್ವಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ವಾಯುಪಡೆ (IAF) ಶತ್ರುಗಳನ್ನು ನುಗ್ಗಿ ಹೊಡೆಯುವುದರಲ್ಲಿ ಮುಂದೆ ಇದೆ. ಅದರಂತೆ ಜೀವ ಉಳಿಸುವಂತಹ ಸಂದರ್ಭ ಬಂದರೆ ಆ ಕಾಯಾರ್ಚರಣೆಯಲ್ಲೂ ಸಹ ಸೇನೆ ಮುಂದೆ ಇರುತ್ತದೆ. ಇದಕ್ಕೆ ತಕ್ಕ ಉದಾಹರಣೆ ಎನ್ನುವಂತೆ ಶುಕ್ರವಾರ (20) ರಾತ್ರೋರಾತ್ರಿ ಪುಣೆಯ ಕಮಾಂಡ್ ಆಸ್ಪತ್ರೆಯಿಂದ ದೆಹಲಿಯ ಸೇನಾ ಆಸ್ಪತ್ರೆಗೆ (R&R) 1 ಲಿವರ್, 2 ಕಿಡ್ನಿಗಳನ್ನು ರವಾನಿಸಿ ರೋಗಿಗಳ ಜೀವ ಉಳಿಸಲು ಸೇನೆ ನೆರವಾಗಿದೆ. ಈ ಕುರಿತು ಇಂದು(21) ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿರುವ ಐಎಎಫ್, ಕಾರ್ಯಾಚರಣೆಯ ವಿವರಗಳನ್ನು ಛಾಯಾಚಿತ್ರಗಳು ಮತ್ತು ಏರ್‌ಲಿಫ್ಟ್‌ನ ವೀಡಿಯೊವನ್ನು ಹಂಚಿಕೊಂಡಿದೆ.
ಯೋಧರೊಬ್ಬರ ಅವಲಂಬಿತ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಅವರು ದಾನ ಮಾಡಿದ ಅಂಗಗಳು ಬಹು ಇತರ ವ್ಯಕ್ತಿಗಳಿಗೆ ಹೊಸ ಜೀವನವನ್ನು ನೀಡಿವೆ. ಎಎಫ್‌ಎಂಎಸ್ ಮತ್ತು ಐಎಎಫ್ ಜಂಟಿಯಾಗಿ ನಿರ್ವಹಿಸಿವೆ ಎಂದು ಭಾರತೀಯ ವಾಯುಪಡೆ ಎಕ್ಸ್ ಸಂದೇಶದಲ್ಲಿ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ, ಬೆಂಗಳೂರಿನಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಗಳನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸಲಾಗಿತ್ತು. ಪರಿಣಾಮವಾಗಿ ಐದು ಜನರಿಗೆ ಜೀವದಾನವಾಗಿತ್ತು. ಒಂದು ಮೂತ್ರಪಿಂಡ ಮತ್ತು ಕಣ್ಣುಗಳನ್ನು ಐಎಎಫ್ ವಿಮಾನವು ಬೆಂಗಳೂರಿನಿಂದ ದೆಹಲಿಗೆ ವಿಮಾನದ ಮೂಲಕ ಸಾಗಿಸಿತ್ತು.




