ಇಂಫಾಲ: ಮೈತೇಯಿ ಸಮುದಾಯದ ಅರಾಂಬಾಯಿ ತೆಂಗೋಲ್ ಸಂಘಟನೆಯ ನಾಯಕನನ್ನು ಬಂಧಿಸಲಾಗಿದೆ ಎಂಬ ವರದಿಯ ನಂತರ ಶನಿವಾರ ರಾತ್ರಿ ಇಂಫಾಲದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ತಮ್ಮ ನಾಯಕನ ಬಿಡುಗಡೆಗೆ ಒತ್ತಾಯಿಸಿದ ಪ್ರತಿಭಟನಾಕಾರರು, ಕ್ವಾಕಿಥೆಲ್ ಮತ್ತು ಉರಿಪೋಕ್‌ನಲ್ಲಿ ರಸ್ತೆ ಮಧ್ಯದಲ್ಲಿ ಟೈರ್ ಮತ್ತು ಹಳೆಯ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಈ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ಬಂಧಿಸಲ್ಪಟ್ಟ ನಾಯಕನ ಹೆಸರು ಅಥವಾ ಆತನ ವಿರುದ್ಧದ ಆರೋಪಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಪ್ರತಿಭಟನೆ ಹಿನ್ನೆಲೆ ರಾಜ್ಯದ ಐದು ಕಣಿವೆಯ ಜಿಲ್ಲೆಗಳ ಪ್ರಾದೇಶಿಕ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 11.45ರಿಂದ ಜಾರಿಗೆ ಬರುವಂತೆ 5 ದಿನಗಳವರೆಗೆ ವಿಎಸ್‌ಎಟಿ, ವಿಪಿಎನ್ ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

