ಸನಾ: ಇರಾನ್ ಮೇಲಿನ ಇಸ್ರೇಲ್‌ನ ದಾಳಿಯಲ್ಲಿ ಅಮೆರಿಕವು ಭಾಗಿಯಾದರೆ ಕೆಂಪು ಸಮುದ್ರದಲ್ಲಿ ಸಾಗುವ ಅಮೆರಿಕದ ಹಡಗುಗಳ ಮೇಲೆ ದಾಳಿ ಮಾಡಲಾಗುವುದು ಎಂದು ಯೆಮೆನ್‌ನ ಹೌದಿ ಬಂಡುಕೋರರ ಗುಂಪಿನ ಮಿಲಿಟರಿ ವಕ್ತಾರರು ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ಯಾವುದೇ ಅರಬ್ ಅಥವಾ ಇಸ್ಲಾಮಿಕ್ ದೇಶವನ್ನು ಗುರಿಯಾಗಿಸಿಕೊಂಡು ನಡೆಯುವ ಯಹೂದಿ ಆಕ್ರಮಣದ ವಿರುದ್ಧ ಹೌದಿಗಳು ಸುಮ್ಮನಿರುವುದಿಲ್ಲ ಎಂದು ಹೌದಿ ವಕ್ತಾರರು ಹೇಳಿಕೆ ನೀಡಿದ್ದಾರೆ ಎಂದು ಯೆಮೆನ್ ದೇಶದ ಸರಕಾರಿ ಮಾಧ್ಯಮವು ದೃಢಪಡಿಸಿದೆ.
2023ರಿಂದ ಇಸ್ರೇಲ್ ದೇಶವು ಫೆಲೆಸ್ತೀನ್ ಮೇಲೆ ದಾಳಿ ಮಾಡಿದ ಬಳಿಕ ಹೌದಿಗಳು ಕೆಂಪು ಸಮುದ್ರದಲ್ಲಿ ಸಾಗುವ ಇಸ್ರೇಲ್ ಸರಕು ಸಾಗಣೆ ಹಡಗುಗಳ ಮೇಲೆ ದಾಳಿ ಪ್ರಾರಂಭಿಸಿದ್ದರು. ಗಾಝಾ - ಫೆಲೆಸ್ತೀನ್ ಗೆ ಬೆಂಬಲವಾಗಿ ಈ ದಾಳಿಗಳನ್ನು ಮಾಡಲಾಗುತ್ತಿದೆ ಎಂದು ಹೌದಿಗಳು ಹೇಳಿಕೊಂಡಿದ್ದರು.
ಅದಾದ ಬಳಿಕ ಮೇ ತಿಂಗಳಿನಲ್ಲಿ, ಅಮೆರಿಕ ಮತ್ತು ಹೌದಿಗಳ ನಡುವೆ ಕದನ ವಿರಾಮ ಏರ್ಪಟ್ಟಿತ್ತು. ಆ ಬಳಿಕ ಹೌದಿ - ಅಮೆರಿಕ ನಡುವಿನ ಕಡಲ ನಡುವಿನ ಸಂಘರ್ಷಕ್ಕೆ ತೆರೆ ಬಿದ್ದಿತ್ತು.




