ಮಂಜೇಶ್ವರ: ಮೀಯಪದವು ಶ್ರೀಗುರುನರಸಿಂಹ ಯಕ್ಷಬಳಗ ಕಲಾಸಂಸ್ಥೆಯು ಚಿಗುರುಪಾದೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಶ್ರೀಕ್ಷೇತ್ರದ ವಠಾರದಲ್ಲಿ ಸೆಪ್ಟಂಬರ 13 ರಂದು ಶನಿವಾರ ಯಕ್ಷಚಿಗುರು-2025 ಸಮಾರಂಭವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಂಡಿದೆ. ಕುಣಿತ ಭಜನೆ, ಸಭಾ ಸಮಾರಂಭ, ಯಕ್ಷಚಿಗುರು 2025 ಪ್ರಶಸ್ತಿ ಪ್ರದಾನ, ತಾಳಮದ್ದಳೆ, ಯಕ್ಷಗಾನ ಬಯಲಾಟ ಜರಗಲಿದೆ.
ಬೆಳಿಗ್ಗೆ 10 ರಿಂದ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘ ಮೀಯಪದವು ತಂಡದ ಸದಸ್ಯರಿಂದ ಕುಣಿತ ಭಜನೆ ಜರಗಲಿದೆ. ಬಳಿಕ 11ಕ್ಕೆ ಸಭಾ ಕಾರ್ಯಕ್ರಮ ಜರಗಲಿದ್ದು, ಶ್ರೀಮದ್ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಶೀರ್ವಚನ ನೀಡುವರು. ಉದ್ಯಮಿ ಪಿ.ಆರ್. ಶೆಟ್ಟಿ ಶೆಟ್ಟಿ ಪೊಯ್ಯೇಲು ಕುಳೂರು ಅಧ್ಯಕ್ಷತೆ ವಹಿಸಲಿದ್ದು, ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಗೌರವ ಉಪಸ್ಥಿತರಿರುವರು. ಅಭ್ಯಾಗತರಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಕಲಾಪೋಷಕ ಅರವಿಂದ ಹೊಳ್ಳ ತಿಂಬರ, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ಹೇರೂರು ವಿಷ್ಣುಮೂರ್ತಿ ದೇವಸ್ಥಾನ ತಾಡ ಕ್ಷೇತ್ರದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇರೂರು, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಶೆಟ್ಟಿ ಕುಳೂರು ಪೆÇಯ್ಯೇಲು ಭಾಗವಹಿಸಲಿದ್ದಾರೆ.
ಕೀರ್ತಿಶೇಷ ಶ್ರೀನಿವಾಸರಾವ್ ಮದಂಗಲ್ಲು ಅವರ ಸಂಸ್ಮರಣೆ ಜರಗಲಿದ್ದು, ಯಕ್ಷ ಚಿಗುರು 2025 ಪ್ರಶಸ್ತಿಯನ್ನು ಶ್ರೀ ಧನ್ವಂತರೀ ಯಕ್ಷಗಾನ ಸಂಘ ಉಳಿಯ ಮಧೂರು ಸಂಸ್ಥೆಗೆ ಪ್ರದಾನ ಮಾಡಲಾಗುವುದು.
ಮಧ್ಯಾಹ್ನ 12 ರಿಂದ ನಾಡಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಮಾಗದ ವಧೆ ಪ್ರಸ್ತುತಿಗೊಳ್ಳಲಿದೆ. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಲವಕುಮಾರ್ ಐಲ, ವಿಕ್ರಂ ಮಯ್ಯ ಪೈವಳಿಕೆ ಭಾಗವಹಿಸಲಿದ್ದು, ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್, ವಾಸುದೇವ ರಂಗಾ ಭಟ್ ಮಧೂರು, ಶ್ರೀಕೃಷ್ಣ ಭಟ್ ದೇವಕಾನ ರಂಜಿಸಲಿದ್ದಾರೆ.
ಸಂಜೆ 5 ರಿಂದ ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದವರಿಂದ ರುಕ್ಮಾಂಗದ ಚರಿತ್ರೆ ಯಕ್ಷಗಾನ ಬಯಲಾಟ ಜರಗಲಿದೆ ಎಂದು ಯಕ್ಷಬಳಗ ಪ್ರಕಟಣೆ ತಿಳಿಸಿದೆ.




