ಮಂಜೇಶ್ವರ: ಕಣ್ವತೀರ್ಥ ಪರಿಸರದಲ್ಲಿ ಹಲವು ವರ್ಷಗಳಿಂದ ಪರಿಸರ ಮಾಲಿನ್ಯ ಚಟುವಟಿಕೆಗಳಿಗೆ ಕಾರಣವಾಗಿರುವ ಯುನೈಟೆಡ್ ಸೀಫುಡ್ ಫ್ಯಾಕ್ಟರಿ ಎಂಬ ಮೀನು ಸಂಸ್ಕರಣಾ ಕೇಂದ್ರದ ವಿರುದ್ಧ ಮಂಜೇಶ್ವರ ಗ್ರಾಮಪಂಚಾಯತಿ ಮುಂಭಾಗದಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಸಭೆಯ ರೂಪುರೇಷೆಯ ಪೂರ್ವಸಿದ್ಧತಾ ಸಭೆ ಕಣ್ವತೀರ್ಥ ನಾಗರೀಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಕಣ್ವತೀರ್ಥ ತಲಪಾಡಿ ದೇವಾಡಿಗ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಸಮಿತಿ ಅಧ್ಯಕ್ಷ ಕಮಾಂಡರ್ ವಿಜಯ ಕುಮಾರ್ ಮಾತನಾಡಿ, ಈ ಅಪಾಯಕಾರಿ ಫ್ಯಾಕ್ಟರಿಯಿಂದ ಪರಿಸರದ ನೀರು ಗಾಳಿ ಕಲುಷಿತವಾಗುತ್ತಿದೆ. ತ್ಯಾಜಯುಕ್ತ ಮಲಿನ ನೀರು ಅಂತರ್ಗಾಮಿಯಾಗಿ ಇಡೀ ಕಣ್ವತೀರ್ಥದ ಜನರ ನೆಮ್ಮದಿಯ ಬದುಕನ್ನು ನಾಶಮಾಡುತ್ತಿದೆ. ಈ ಬಗ್ಗೆ ಕಳೆದ 7 ವರ್ಷಗಳಲ್ಲಿ ಹಲವು ಪ್ರಯತ್ನ ಮಾಡಿದರೂ ಫಲ ದೊರೆಯದಿರುವುದಕ್ಕೆ ಪಂಚಾಯತಿ ನೇರ ಹೊಣೆಯಾಗಿದ್ದು ಈ ಬಗ್ಗೆ ಪಂಚಾಯತಿಯ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳಲು ಪ್ರತಿಭಟನೆಯ ಹೊರತು ಬೇರೆ ದಾರಿ ಇಲ್ಲ ಎಂಬುದಾಗಿ ಅಭಿಪ್ರಾಯಪಟ್ಟರು.
ಸುಭಾಶ್ಚಂದ್ರ ಕಣ್ವತೀರ್ಥ ಮಾತನಾಡಿ, ಹಗಲು ರಾತ್ರಿ ಎನ್ನದೆ ಕಲುಷಿತ ನೀರಿನ ದುರ್ವಾಸನೆ ಊರಿನ ಜನರ ನಿದ್ದೆಗೆಡಿಸಿದೆ. ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನವಿದ್ದರೂ ಅದನ್ನು ಉಪೇಕ್ಷಿಸಲಾಗಿದೆ. ಅದಕ್ಕೆ ಪಂಚಾಯಿತಿಯ ಪೂರಕ ನಿಲುವೇ ಕಾರಣವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತಿ ಸದಸ್ಯೆ ವಿನಯ ಭಾಸ್ಕರ್ ಫ್ಯಾಕ್ಟರಿಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯ ಒಟ್ಟು ಅಭಿಪ್ರಾಯದಂತೆ ಸೆ. 15 ರಂದು ಬೃಹತ್ ಪ್ರತಿಭಟನಾ ಜಾಥಾದ ಮೂಲಕ ಮೆರವಣಿಗೆ ಸಾಗಿ ಮಂಜೇಶ್ವರ ಪಂಚಾಯತಿ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಿ ಕೂಡಲೇ ಸದ್ರಿ ಫ್ಯಾಕ್ಟರಿಯ ಪರವಾನಿಗೆಯನ್ನು ರದ್ದುಗೊಳಿಸುವ ಬಗ್ಗೆ ಒತ್ತಾಯಿಸುವಂತೆ ನಿರ್ಧರಿಸಲಾಯಿತು. ಮಧುಸೂದನ ಆಚಾರ್ಯ, ಪಂಚಾಯತಿ ಸದಸ್ಯರಾದ ಲಕ್ಷ್ಮಣ ಕುಚ್ಚಿಕಾಡ್ ಕಣ್ವತೀರ್ಥ, ತಲಪಾಡಿ ದೇವಾಡಿಗ ಸಂಘದ ಅಧ್ಯಕ್ಷ ಜಯಂತ್ ಟಿ.ಪಿ ಹೌಸ್, ಸುಕುಮಾರ್, ಸುನಿಲ್ ಡಿ.ಸೋಜ, ಬಾಲಕೃಷ್ಣ, ಪ್ರದೀಪ್ ಕುಮಾರ್, ಪುಷ್ಪಲತಾ, ಸುಧಾಕರ ಮೊದಲಾದ ನಾಗರಿಕ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಡಾ.ಚಂದ್ರಹಾಸ ಕಣ್ವತೀರ್ಥ ಸ್ವಾಗತಿಸಿ, ಪ್ರವೀಣ್ ಕುಂಞ್ಞಹಿತ್ತಿಲು ವಂದಿಸಿದರು.






