HEALTH TIPS

ತಮಿಳುನಾಡಿನಲ್ಲಿ ಭಾರಿ ದುರಂತ | ನಟ ವಿಜಯ್ ರ್‍ಯಾಲಿಯಲ್ಲಿ ಕಾಲ್ತುಳಿತ: 38 ಸಾವು

ಕರೂರು: 'ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್‌ ಅವರು ಕರೂರು ಜಿಲ್ಲೆಯಲ್ಲಿ ಶನಿವಾರ ನಡೆಸಿದ ರ್‍ಯಾಲಿಯಲ್ಲಿ ಕಾಲ್ತುಳಿತ ಉಂಟಾದ ಕಾರಣ ಉಸಿರುಗಟ್ಟಿ ಕನಿಷ್ಠ 38 ಮಂದಿ ಮೃತಪಟ್ಟಿದ್ದಾರೆ.

ಇದೇ ವೇಳೆ ಪ್ರಜ್ಞೆತಪ್ಪಿದ ಸುಮಾರು 58 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

'ಮೃತಪಟ್ಟವರಲ್ಲಿ ಮಕ್ಕಳು, ಮಹಿಳೆಯರೂ ಸೇರಿದ್ದಾರೆ. ಆಂಬುಲೆನ್ಸ್‌ ಗಳು ಒಂದಾದ ಮೇಲೊಂದರಂತೆ ಬರುತ್ತಲೇ ಇವೆ. ಈಗಲೇ ಸಾವಿನ ಸಂಖ್ಯೆಯನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ' ಎಂದು ಕರೂರು ವೈದ್ಯಕೀಯ ಕಾಲೇಜಿನ ಡೀನ್‌ ಆರ್‌. ಶಾಂತಿಮಲರ್‌ ಅವರು ಮಾಧ್ಯಮಗಳಿಗೆ ತಿಳಿಸಿದರು. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು ಎನ್ನಲಾಗುತ್ತಿದೆ.

ವಿಜಯ್‌ ಅವರು ತಮ್ಮ ಪಕ್ಷದ ಪರ ರಾಜ್ಯದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ವಿಜಯ್‌ ಅವರು ನಿಗದಿತ ಅವಧಿಗಿಂತ ಸುಮಾರು ಆರು ತಾಸು ತಡವಾಗಿ ರ್‍ಯಾಲಿ ನಡೆಯುತ್ತಿದ್ದ ಸ್ಥಳಕ್ಕೆ ಬಂದರು. ಈ ವೇಳೆಯಲ್ಲಿ ಸ್ಥಳದಲ್ಲಿ ಜನ ಜಮಾವಣೆ ಗೊಳ್ಳುತ್ತಲೇ ಸಾಗಿದರು. ನಟನನ್ನು ನೋಡಲು ಪಕ್ಷದ ಕಾರ್ಯಕರ್ತರು ಹಾಗೂ ಸಾವಿರಾರು ಅಭಿಮಾನಿಗಳು ಸೇರಿದ್ದರು. ಪುಟ್ಟ ಮಕ್ಕಳು ಕೂಡ ದೊಡ್ಡ ಸಂಖ್ಯೆಯಲ್ಲಿದ್ದರು.

ಮೃತರಲ್ಲಿ ಟಿವಿಕೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳೂ ಸೇರಿದ್ದಾರೆ ಎನ್ನಲಾಗಿದೆ. 'ಜನದಟ್ಟಣೆ ಹೆಚ್ಚಾಗುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರ ಮನವಿ ಮೇರೆಗೆ ವಿಜಯ್‌ ಅವರು ಅರ್ಧದಲ್ಲಿಯೇ ಭಾಷಣ ನಿಲ್ಲಿಸಿದರು. ಜನಸಂದಣಿ ಯಲ್ಲಿದ್ದ ಹಲವರು ಪ್ರಜ್ಞೆ ತಪ್ಪುತ್ತಿದ್ದುದನ್ನು ಗಮನಿಸಿದ ವಿಜಯ್‌, ಜನರತ್ತ ನೀರಿನ ಬಾಟಲಿಗಳನ್ನು ಎಸೆದರು' ಎಂದು ಮಾಧ್ಯಮಗಳು ವರದಿ ಮಾಡಿವೆ.

'ವಿಜಯ್‌ ಅವರನ್ನು ಹತ್ತಿರದಿಂದ ನೋಡಲು, ಅವರಿದ್ದ ಬಸ್‌ನ ಹತ್ತಿರಕ್ಕೆ ನುಗ್ಗಲು ಜನ ಯತ್ನಿಸಿದರು. ಇದರಿಂದಾಗಿ ಕಾಲ್ತುಳಿತ ಉಂಟಾಯಿತು. ನೂಕುನುಗ್ಗಲು ಹೆಚ್ಚಾಗಿದ್ದರಿಂದ ಕೆಲವರಿಗೆ ಉಸಿರುಗಟ್ಟಿತು. ದಟ್ಟಣೆ ಮಧ್ಯೆ ಘಟನಾ ಸ್ಥಳಕ್ಕೆ ಆಂಬುಲೆನ್ಸ್‌ ತಲುಪುದೂ ಕಷ್ಟವಾಯಿತು. ಇದೇ ವೇಳೆ ಪುಟ್ಟ ಮಗುವೊಂದು ಕಾಣೆಯಾಗಿದೆ' ಎಂದು ವರದಿಯಾಗಿದೆ. ವೇದಿಕೆ ಮೇಲೆ ಇರುವಂತೆಯೇ, ಮಗುವನ್ನು ಹುಡುಕಿಕೊಡಲು ವಿಜಯ್‌ ಅವರು ಪೊಲೀಸರಲ್ಲಿ ಮನವಿ ಮಾಡಿದರು.

ಪ್ರಜ್ಞೆ ತಪ್ಪಿದವರನ್ನು ಕರೂರು ವೈದ್ಯಕೀಯ ಆಸ್ಪತ್ರೆ ಹಾಗೂ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಎರಡೂ ಆಸ್ಪತ್ರೆಗಳಲ್ಲಿ ಮೃತರ ಹಾಗೂ ಪ್ರಜ್ಞೆತಪ್ಪಿದವರ ಕುಟುಂಬಸ್ಥರು ಅಳು ಮುಗಿಲು ಮುಟ್ಟಿತ್ತು. ತಮ್ಮವರಿಗಾಗಿ ಹುಡುಕಾಟ ನಡೆಸುತ್ತಿದ್ದ ದೃಶ್ಯಗಳು ಮನ ಕಲಕುವಂತಿದ್ದವು.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಭಾನುವಾರ ಕರೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ನರೇಂದ್ರ ಮೋದಿ, ಪ್ರಧಾನಿ ದುರದೃಷ್ಟಕರ ಘಟನೆಯಿಂದ ದುಃಖವಾಗಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ. ಗಾಯಗೊಂಡ ಎಲ್ಲರೂ ಶೀಘ್ರ ಗುಣಮುಖರಾಗಲಿಎಂ.ಕೆ. ಸ್ಟಾಲಿನ್‌, ಮುಖ್ಯಮಂತ್ರಿ ಕರೂರಿನಲ್ಲಿ ನಡೆದ ಕಾಲ್ತುಳಿತ ಹೃದಯ ವಿದ್ರಾವಕ. ನೊಂದವರಿಗೆ, ಗಾಯಾಳುಗಳಿಗೆ ತಕ್ಷಣವೇ ಸ್ಪಂದಿಸುವಂತೆ ಸಚಿವರು, ಮಾಜಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿ, ಎಡಿಜಿಪಿಗೆ ಸೂಚಿಸಿರುವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries