ಪೆರ್ಲ: ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವತಿಯಿಂದ 26ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಅಕ್ಟೋಬರ್ 20 ಮತ್ತು 21ರಂದು ನಡೆಯಲಿದೆ. ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರಶಸ್ತಿ ಪ್ರದಾನ ಹಾಗೂ ನಿರಂತರ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ.
ಅಕ್ಟೋಬರ್ 20ರಂದು ನವರಾತ್ರಿ ಮಹೋತ್ಸವದ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಶ್ರೀ ಶಾರದಾ ಪ್ರತಿಷ್ಠೆ ನಡೆಯಲಿದ್ದು, 9.30ರಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 10.30ಕ್ಕೆ ಕೇಂದ್ರದ ಸತ್ಯಶಾಂತಾ ಪ್ರತಿಷ್ಠಾನದ ರಂಗವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿಯ ವತಿಯಿಂದ ಕೇಂದ್ರಕ್ಕೆ ಕೊಡುಗೆಯಾಗಿ ನೀಡಲಾದ ಇನ್ವರ್ಟರ್ ವ್ಯವಸ್ಥೆಯನ್ನು ಉದ್ಘಾಟಿಸಲಾಗುವುದು. ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ರಾಜು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಬ್ಬಣಕೋಡಿ ರಾಮ ಭಟ್ ಅವರಿಗೆ ‘ಯಕ್ಷ ಸಂಜೀವ’ ಪ್ರಶಸ್ತಿ
ಯಕ್ಷನಮನ ಅಜೇರು ವತಿಯಿಂದ ಮದುಕುಂಜ ದಿವಂಗತ ವಾಸುದೇವ ಪ್ರಭುಗಳ ಸ್ಮರಣಾರ್ಥ ನೀಡಲಾಗುವ ‘ಯಕ್ಷ ಸಂಜೀವ’ ಪ್ರಶಸ್ತಿಯನ್ನು ಪ್ರಸಿದ್ಧ ಯಕ್ಷಗಾನ ಗುರು ಸಬ್ಬಣಕೋಡಿ ರಾಮ ಭಟ್ ಅವರಿಗೆ ಪ್ರದಾನ ಮಾಡಲಾಗುವುದು. ಎಡನೀರು ಶ್ರೀಗಳು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ ಪೂರ್ವರಂಗ ನಡೆಯಲಿದ್ದು, 2.30ರಿಂದ ನಿರಂತರ ಯಕ್ಷಗಾನ ಬಯಲಾಟ ಆರಂಭವಾಗಲಿದೆ.
ಅಕ್ಟೋಬರ್ 21ರಂದು ವಿಜಯದಶಮಿ ಆಚರಣೆ
ವಿಜಯದಶಮಿಯ ಅಂಗವಾಗಿ ಅಕ್ಟೋಬರ್ 21ರಂದು ಬೆಳಗ್ಗೆ 9.30ಕ್ಕೆ ಶ್ರೀ ಶಾರದಾ ಪೂಜೆ, ಅಕ್ಷರಾಭ್ಯಾಸ ಹಾಗೂ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳ ಸೇರ್ಪಡೆ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 10 ಗಂಟೆಯಿಂದ ಭಜನೆ, 11 ಗಂಟೆಗೆ ಪೂರ್ವರಂಗ ಹಾಗೂ ಮಧ್ಯಾಹ್ನ 1.30ರಿಂದ ನಿರಂತರ ಯಕ್ಷಗಾನ ಬಯಲಾಟ ಜರುಗಲಿದೆ.



