ಮಂಜೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ದ ಕನಸನ್ನು ಸಾಕಾರಗೊಳಿಸುವಲ್ಲಿ ಮಹಿಳಾ ಸಮಾಜ ಪ್ರಮುಖ ಪಾತ್ರ ವಹಿಸುವುದರ ಜತೆಗೆ ಗಣನೀಯ ಕೊಡುಗೆ ನೀಡಲು ಸಾಧ್ಯವಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.
ಬಿಜೆಪಿ ಮೀಂಜ ಪಂಚಾಯಿತಿ ಸಮಿತಿಯ ಆಶ್ರಯದಲ್ಲಿ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ವಿವಿಧ ವಾರ್ಡ್ಗಳ ಅಂಗನವಾಡಿ ಶಿಕ್ಷಕಿಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಹರಿತ ಕರ್ಮಸೇನೆ ಸದಸ್ಯರನ್ನು ಗೌರವಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಕ್ಷೇಮಾಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದು ಅಶ್ವಿನಿ ಹೇಳಿದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತೆಯರು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಬಿಜೆಪಿ ಮೀಂಜ ಪಂಚಾಯಿತಿ ಸಮಿತಿ ಅಧ್ಯಕ್ಷ ಚಂದ್ರಹಾಸ ಬೆಜ್ಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಆದರ್ಶ ಬಿ.ಎಂ., ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಜ್ಯೋತಿ ರೈ, ಜಯಪ್ರಕಾಶ್ ತೊಟ್ಟೆತ್ತೋಡಿ, ಮೀಂಜ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ಕೃಷ್ಣ ಬೆಜ್ಜ, ಮೋಹನ್ದಾಸ್ ಶೆಟ್ಟಿ, ಆಶಾಲತಾ, ಶಾಂತಕುಮಾರಿ, ಸಂಧ್ಯಾ, ಶಾಲಿನಿ, ಲತೀಶ್ ಕೆ., ಮೀಂಜ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ನವೀನ್ ಬೆಜ್ಜ ಹಾಗೂ ವರ್ಕಾಡಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿ ತುಳಸಿ ಉಪಸ್ಥಿತರಿದ್ದರು.



