ಕಾಸರಗೋಡು: ಯಕ್ಷಗಾನ ಕ್ಷೇತ್ರಕ್ಕೆ ಅಪರೂಪವೆನಿಸಿದ ಶ್ರೀ ಪುರಂದರದಾಸರು ರಚಿಸಿದ "ಅನಸೂಯಾ ಚರಿತ್ರೆ" ಯಕ್ಷಗಾನ ಪ್ರಸಂಗವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನವು ಪ್ರಕಟಿಸಿದ್ದು, ಕೃತಿ ಬಿಡುಗಡೆ ಸಮಾರಂಭ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದಲ್ಲಿ ಜರುಗಿತು.
ಶ್ರೀ ಸುಬ್ರಮಣ್ಯ ಮಠದ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರು ಕೃತಿ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡ, ದಾಸರ ಪದಗಳು ಶ್ರೇಷ್ಠ ಸಾಹಿತ್ಯಪ್ರಕಾರಗಳಾಗಿದ್ದು, ಯಕ್ಷಗಾನ ಸಾಹಿತ್ಯ ಕ್ಷೇತ್ರಕ್ಕೆ ಸೇರ್ಪಡೆಗೊಂಡ ಅತ್ಯಂತ ಪ್ರಾಚೀನ ಕಾಲದ ಈ ಕೃತಿಯಿಂದ ಯಕ್ಷಗಾನ ಕಲೆಯು ಉಚ್ಛ್ರಾಯ ಸ್ಥಿತಿಗೆ ತಲುಪುವಂತಾಗಲಿದೆ. ಹೆಚ್ಚಿನ ಪ್ರಸಂಗ ಪದ್ಯಗಳನ್ನು ಕಂಠಪಾಠ ಹೊಂದಿರುವ ಭಾಗವತ ಶ್ರೇಷ್ಠ ರಾಮಕೃಷ್ಣ ಮಯ್ಯ ಅವರ ನೇತೃತ್ವದ ಸಿರಿಬಾಗಿಲು ಪ್ರತಿಷ್ಠಾನದ ಇಂತಹ ಹಲವಾರು ಸಮಾಜಮುಖೀ ಚಟುವಟಿಕೆಗಳು ನಮಗೆ ಸಂತೋಷ ತಂದಿದೆ. ಪ್ರತಿಷ್ಠಾನದಿಂದ ಮತ್ತಷ್ಟು ಸಾಹಿತ್ಯ-ಸಾಂಸ್ಕೃತಿಕ ಕೊಡುಗೆಗಳು ಸಮಾಜಕ್ಕೆ ಸಿಗುವಂತಾಗಲಿ ಎಂದು ಆಶೀರ್ವದಿಸಿದರು.
ಮಂಗಳೂರು ವಿಶ್ವ ವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಡಾ. ಎಂ. ಪ್ರಭಾಕರ ಜೋಶಿ ಕ್ರತಿಯ ಬಗ್ಗೆ ಮಾತನಾಡಿದರು. ಕೃತಿಯ ಸಂಪಾದಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಕೃತಿ ಪರಿಚಯವನ್ನು ಮಾಡುವುದರೊಂದಿಗೆ ಇದರ ಸಂಪಾದನೆ-ಸಂಶೋಧನೆಯ ವಿವರಗಳನ್ನು ಮಂಡಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಶ್ರೀ ಕೃಷ್ಣ ಶರ್ಮಾ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ಶ್ರೀ ರಾಜಗೋಪಾಲ ಕನ್ಯಾನ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮಿ ಆರ್. ಹೊಳ್ಳ ವಂದಿಸಿದರು.
"ದಾಸ ಶ್ರೇಷ್ಠ ಶ್ರೀಪುರಂದರದಾಸರು ರಚಿಸಿದ ಯಕ್ಷಗಾನ ಪ್ರಸಂಗವನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಸಂಪಾದಿಸಿದ್ದು, ಈ ಅಮೂಲ್ಯ ಕೃತಿಯನ್ನು ಸಿರಿಬಾಗಿಲು ಪ್ರತಿಷ್ಠಾನವು ಪ್ರಕಾಶನಗೊಳಿಸಿದೆ.
ಕಾರ್ಯಕ್ರಮದ ಅಂಗವಾಗಿ ಅನಸೂಯಾ ಚರಿತ್ರೆ ಪ್ರಸಂಗದ ಗಾನ ಪ್ರಸ್ತುತಿಯನ್ನು ಪ್ರಥಮ ಬಾರಿಗೆ ನಡೆಸಲಾಯಿತು. ಹಿರಿಯ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ತಲ್ಪನಾಜೆ ವೆಂಕಟ್ರಮಣ ಭಟ್, ಕುಮಾರಿ ಹೇಮ ಸ್ವಾತಿ ಕುರಿಯಾಜೆ ಭಾಗವತಿಕೆ, ಚೆಂಡೆ-ಮದ್ದಳೆಯಲ್ಲಿ,ಹಿರಿಯ ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್, ಮಧೂರು ಗೋಪಾಲಕೃಷ್ಣ ನಾವಡ, ರಾಮಮೂರ್ತಿ ಕುದುರೆಕ್ಕೋಡ್ಲು ಹಾಗೂ ಚಕ್ರತಾಳದಲಲಿ ರಾಜ ಮಯ್ಯ ಸಹಕರಿಸಿದರು. ವಸಂತ ಭಾರದ್ವಾಜ ಅವರು ಗಾನಪ್ರಸ್ತುತಿಯನ್ನು ನಿರ್ವಹಿಸಿದರು.



