ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ಜಿಲ್ಲೆಯ ಹಿಂದುಳಿದ ಪಂಚಾಯತಿಗಳಲ್ಲಿ ಒಂದಾಗಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಪೈವಳಿಕೆ ಕೇರಳದ ಅತ್ಯುತ್ತಮ ಪಂಚಾಯತಿಗಳಲ್ಲಿ ಒಂದಾಗಿದೆ ಎಂದು ಗ್ರಾಮ ಪಂಚಾಯತಿಯ ಅಭಿವೃದ್ಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ನವ ಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್ ಹೇಳಿದರು.
ಪೈವಳಿಕೆ ಅಭಿವೃದ್ಧಿಗೆ ಉತ್ತಮ ಉದಾಹರಣೆಯಾಗಿದೆ. ಪಂಚಾಯತಿಯ ಸುಮಾರು 170 ರಷ್ಟಿರುವ ಮಹಿಳಾ ಸಂಘಟನೆಗಳ ಬಲವು ಪಂಚಾಯತಿಯ ಅಭಿವೃದ್ಧಿ ವೇಗ ಹೆಚ್ಚಿಸಿದೆ. ಪಂಚಾಯತಿಯಲ್ಲಿರುವ ಶಾಲೆಗಳಿಗೆ ಸ್ಟಾರ್ ಸ್ಥಾನಮಾನ ನೀಡಿದರೆ, ಪೈವಳಿಗೆ ಪಂಚಾಯತಿಯ ಶಾಲೆಗಳು ಈಗ ತ್ರೀ-ಸ್ಟಾರ್ ಸ್ಥಾನಮಾನದಲ್ಲಿವೆ ಮತ್ತು ಕೇವಲ 26 ಕಿ.ಮೀ. ಇದ್ದ ಟಾರ್ ರಸ್ತೆ 150 ಕಿ.ಮೀ. ತಲುಪಿದೆ ಎಂದರು.
ಪೈವಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆ. ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಕಾರ್ಯದರ್ಶಿ ಬಿ. ಜಿಜಿ ಪಂಚಾಯತಿಯ ಅಭಿವೃದ್ಧಿ ಸಾಧನೆಗಳನ್ನು ಮಂಡಿಸಿದರು. ವಾರ್ಡ್ ಸದಸ್ಯರಾದ ರಹಮತ್ ರೆಹಮಾನ್, ಇರ್ಷಾನಾ ಇಸ್ಮಾಯಿಲ್, ಅಶೋಕ್ ಭಂಡಾರಿ, ಕೆ. ಅಬ್ದುಲ್ಲ, ಸುನಿತಾ ವಾಲ್ಟಿ ಡಿ'ಸೋಜಾ, ಶ್ರೀನಿವಾಸ ಭಂಡಾರಿ, ಬಾಯಾರ್ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮುರಳೀಧರ ಶೆಟ್ಟಿ, ಕಾಯರ್ಕಟ್ಟೆ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಶಿವರಾಮ್ ಭಟ್, ಎಲ್.ಎಸ್.ಜಿ. ಡಿಎಇ ವಿಶಾಖ್ ಸಂತೋಷ್, ಪೈವಳಿಕೆ ಕೃಷಿ ಭವನ ಸಹಾಯಕ ವಿನೋದ್ ಕುಮಾರ್, ಪೈವಳಿಕೆ ಸಿಡಿಎಸ್ ಅಧ್ಯಕ್ಷೆ ಚಂದ್ರಕಲಾ ಉಪಸ್ಥಿತರಿದ್ದರು. ಪೈವಳಿಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರ್ ಸ್ವಾಗತಿಸಿ, ಸಹಾಯಕ ಕಾರ್ಯದರ್ಶಿ ಪಿ. ವೆಂಕಟೇಶ್ವರ ಭಟ್ ವಂದಿಸಿದರು. ಲೈಫ್ ಭವನ ಯೋಜನೆಗೆ ಉಚಿತ ಭೂಮಿ ನೀಡಿದ ಮುಹಮ್ಮದ್ ಹನೀಫ್, ಹಸಿರು ಕ್ರಿಯಾಸೇನೆ ಸದಸ್ಯರು ಮತ್ತು ಉದ್ಯೋಗ ಖಾತರಿ ಕಾರ್ಮಿಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಗತ್ಯಗಳಿಗೆ ಸಂಬಂಧಿಸಿದಂತೆ ನಡೆದ ಮುಕ್ತ ವೇದಿಕೆಯಲ್ಲಿ, ಪಂಚಾಯತಿಯ ಸರ್ಕಾರಿ ಐಟಿಐಗಳನ್ನು ಹಂಚಿಕೆ ಮಾಡುವ ಕ್ರಮಗಳನ್ನು ತ್ವರಿತಗೊಳಿಸಲು ಮತ್ತು ರಾಜ್ಯ ಗ್ರಂಥಾಲಯ ಮಂಡಳಿಯ ಸದಸ್ಯರಾಗಿದ್ದ ಎಸ್. ನಾರಾಯಣ ಭಟ್ ಅವರ ಹೆಸರಿನಲ್ಲಿ ಸ್ಮಾರಕವನ್ನು ಸ್ಥಾಪಿಸಲು ಬೇಡಿಕೆಯನ್ನು ಎತ್ತಲಾಯಿತು. ಸ್ಥಳೀಯ ಕುಡಿಯುವ ನೀರಿನ ಯೋಜನೆ ಮತ್ತು ಒಳರೋಗಿ ಚಿಕಿತ್ಸೆಯೊಂದಿಗೆ ಆಯುರ್ವೇದ ಆಸ್ಪತ್ರೆಯನ್ನು ಸ್ಥಾಪಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಯಿತು.

.jpeg)
.jpeg)
