ಪಾಟ್ನಾ: ರಾಜ್ಯದಾದ್ಯಂತ ಸನಾತನ ಧರ್ಮವನ್ನು ಪ್ರಚಾರ ಮಾಡಲು ಎಲ್ಲ 38 ಜಿಲ್ಲೆಗಳಲ್ಲಿ ಸಂಚಾಲಕರನ್ನು ನೇಮಿಸಲು ನೂತನ ಸರ್ಕಾರ ಮುಂದಾಗಿದೆ. ಬಿಹಾರ ರಾಜ್ಯ ಧಾರ್ಮಿಕ ಟ್ರಸ್ಟ್ ಮಂಡಳಿ (ಬಿಎಸ್‌ಆರ್‌ಟಿಸಿ) ಅಡಿ ಬರುವ ದೇವಸ್ಥಾನಗಳ ಪ್ರಧಾನ ಅರ್ಚಕರನ್ನು ಸಂಚಾಲಕರನ್ನಾಗಿ ನೇಮಿಸಲಾಗುವುದು.
ಮಂಡಳಿ ಅಡಿ ಒಟ್ಟು 2,499 ದೇವಸ್ಥಾನಗಳು ಹಾಗೂ ಮಠಗಳು ನೋಂದಣಿಯಾಗಿವೆ. ಈ ಬಗ್ಗೆ ಭಾನುವಾರ ಮಾಹಿತಿ ನೀಡಿದ ಮಂಡಳಿಯ ಮುಖ್ಯಸ್ಥ ರಣಬೀರ್ ನಂದನ್, 'ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಸಂಚಾಲಕರ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು' ಎಂದರು.
'ಸನಾತನ ಧರ್ಮವನ್ನು ಪ್ರಚಾರ ಮಾಡಲು ಅಂತರರಾಷ್ಟ್ರೀಯ ಮಟ್ಟದ ಸಮಾವೇಶವನ್ನು ಮುಂಬರುವ ತಿಂಗಳಲ್ಲಿ ರಾಜ್‌ಗೀರ್‌ನಲ್ಲಿ ಮಂಡಳಿ ವತಿಯಿಂದ ಆಯೋಜಿಸಲಾಗುವುದು. ಸನಾತನ ಧರ್ಮದ ಹಬ್ಬಗಳು, ಪೂಜೆಗಳು ಮತ್ತು ಇತರೆ ಧಾರ್ಮಿಕ ಚಟುವಟಿಕೆಗಳ ಮಾಹಿತಿ ಇರುವ ಧಾರ್ಮಿಕ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು' ಎಂದರು.




