ಪೆರ್ಲ: ಶಿರಿಯ ನದಿಗೆ ಬಾಕಿಲಪದವಿನಲ್ಲಿ ನಿರ್ಮಿಸುತ್ತಿರುವ ಸೇತುವೆಯ ಕೆಲಸ ಕುಂಠಿತವಾಗಿರುವ ಬಗ್ಗೆ ನಲ್ಕ ವಾರ್ಡ್ ಸದಸ್ಯ ಜಗದೀಶ್ ಕುಲಾಲ್ ನಲ್ಕ ಹಾಗೂ ಶಂಕರ್ ಭಟ್ ಶುಳುವಾಲಮೂಲೆ ಅವರು ಕಾಸರಗೋಡು ಅಭಿವೃದ್ಧಿ ವಿಕಸನ ಪ್ಯಾಕೇಜ್ ನ ವಿಶೇಷ ಅಧಿಕಾರಿ ಚಂದ್ರನ್ ವಿ ಅವರ ಚೊತೆ ಚರ್ಚೆ ನಡೆಸಿದರು.
ಈಗಾಗಲೇ ಸೇತುವೆಗೆ ಹೆಚ್ಚುವರಿ ಅನುದಾನವನ್ನು ಮೀಸಲಿರಿಸಿ ಆದಷ್ಟು ಶೀಘ್ರ ತಾಂತ್ರಿಕ ಅನುಮೋದನೆ ಪಡೆದು ಮರು ಗುತ್ತಿಗೆಯನ್ನು ನೀಡಲು ಕಾರ್ಯ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದರು. ಜೊತೆಗೆ ಸಣ್ಣ ನೀರಾವರಿ ಯೋಜನೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಶಿರಿಯಾ ನದಿಗೆ ಬಾಕಿಲಪದವು ಪ್ರದೇಶದಲ್ಲಿ ನೀರಾವರಿ ಪ್ರಯೋಜನಕ್ಕಾಗಿ ಕಿಂಡಿ ಅಣೆಕಟ್ಟು ನಿರ್ಮಿಸುವಂತೆ ಮನವಿ ಸಲ್ಲಿಸಲಾಯಿತು.
ದಶಕಗಳ ಬೇಡಿಕೆ:
ಎಣ್ಮಕಜೆ ಪಂ.ವ್ಯಾಪ್ತಿಯ ಗಡಿ ಗ್ರಾಮ ಬಾಕಿಲಪದವು ಈಗಲೂ ಕುಗ್ರಾಮವಾಗಿಯೇ ಉಳಿದುಕೊಂಡಿದೆ. ಮೂಲ ಸೌಕರ್ಯ ಕೊರತೆಯ ಕಾರಣ ಎರಡು ವಾರ್ಡ್‍ಗಳು ದಶಕಗಳಿಂದ ದುರಿತ ಅನುಭವಿಸುತ್ತಿದ್ದಾರೆ. ನಲ್ಕ ಸಮೀಪದ ಬಿರ್ಮೂಲೆ ಬಳಿಕ ಶಿರಿಯಾ ಹೊಳೆ ಬಾಕಿಲಪದವು ಸಂಪರ್ಕದ ಮಧ್ಯೆ ಸೇತುವೆ ಇಲ್ಲದೆ ಸಂಪರ್ಕ ಕೊರತೆ ಎದುರಿಸುತ್ತಿದೆ. ಮಳೆಗಾಲದಲ್ಲಂತೂ 15 ಕಿಲೋಮೀಟರ್ ಗಳಷ್ಟು ಸುತ್ತುಬಳಸಿ ಕರ್ನಾಟಕದ ಮೂಲಕ ಹಾದು ಪೆರ್ಲ ತಲುಪಬೇಕಾದ ಸ್ಥಿತಿ ಇಲ್ಲಿಯ ಜನತೆಯದ್ದು. ರಸ್ತೆ, ಬಸ್ ಸೌಕರ್ಯವೆಂಬುದು ಈ ಗ್ರಾಮದ ಕನಸಿನ ಮಾತು. ಈ ನಿಟ್ಟಿನಲ್ಲಿ ಸಾರ್ವಜನಿಕರ ದಶಕಗಳ ಬೇಡಿಕೆ ಸೇತುವೆ ನಿರ್ಮಾಣದ ಮೂಲಕ ಸಾಕಾರಗೊಳ್ಳುವುದೆಂಬ ಕನಸಿನ ಮಧ್ಯೆ ಅನುಮೋದನೆ ಲಭಿಸಿದ ಸೇತುವೆ ನಿರ್ಮಾಣ ಕಾಮಗಾರಿ ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿದೆ.



