ಅನಂತಪುರ: ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದ ಪರಕಾಮಣಿಯಿಂದ (ಹುಂಡಿಯಲ್ಲಿನ ನೋಟು ಮತ್ತು ನಾಣ್ಯಗಳ ಎಣಿಕೆ ಕೇಂದ್ರ) ವಿದೇಶಿ ಕರೆನ್ಸಿ ಕಳ್ಳತನವನ್ನು ವರದಿ ಮಾಡಿದ್ದ ತಿರುಮಲ ತಿರುಪತಿ ದೇವಸ್ಥಾನಮ್ಸ್ ನ (ಟಿಟಿಡಿ) ಮಾಜಿ ಸಹಾಯಕ ಜಾಗ್ರತ ಮತ್ತು ಭದ್ರತಾ ಅಧಿಕಾರಿ ವೈ.ಸತೀಶ್ ಕುಮಾರ್ ಅವರು ಶುಕ್ರವಾರ ಅನಂತಪುರ ಜಿಲ್ಲೆಯ ತಾಡಪತ್ರಿ-ಗೂಟಿ ಮುಖ್ಯ ರೈಲು ಮಾರ್ಗದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕರ್ನೂಲು ಜಿಲ್ಲೆಯ ಪತ್ತಿಕೊಂಡ ನಿವಾಸಿಯಾಗಿದ್ದ ಸತೀಶ್ ಕುಮಾರ್ ಗೂಟಿ ಸರಕಾರಿ ರೈಲ್ವೆ ಪೋಲಿಸ್ ನಲ್ಲಿ ಸಬ್-ಇನ್ಸ್‌ಪೆಕ್ಟರ್ ಆಗಿದ್ದರು. ಕೋಮಲಿ ಮತ್ತು ಜುತೂರು ನಿಲ್ದಾಣಗಳ ನಡುವೆ ಎರಡು ಹಳಿಗಳ ಮಧ್ಯೆ ಅವರ ಮೃತದೇಹ ಪತ್ತೆಯಾಗಿದೆ.
ಸತೀಶ್ ಕುಮಾರ್ ಗುರುವಾರ ರಾತ್ರಿ ಗುಂತಕಲ್ ನಲ್ಲಿ ಕಾಯ್ದರಿಸಿದ ಟಿಕೆಟ್ ನೊಂದಿಗೆ ರಾಯಲ್‌ಸೀಮಾ ಎಕ್ಸ್‌ಪ್ರೆಸ್ ಹತ್ತಿದ್ದರು. ಶುಕ್ರವಾರ ನಸುಕಿನ ಎರಡು ಗಂಟೆಯ ಸುಮಾರಿಗೆ ಅವರು ಹವಾ ನಿಯಂತ್ರಿತ ಬೋಗಿಯಿಂದ ಕೆಳಕ್ಕೆ ಬಿದ್ದಿದ್ದಾರೆ ಅಥವಾ ತಳ್ಳಲ್ಪಟ್ಟಿದ್ದಾರೆ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮೃತದೇಹದಲ್ಲಿ ಆಳವಾದ ಗಾಯದ ಗುರುತುಗಳಿದ್ದು, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಇದು ಆತ್ನಹತ್ಯೆಯಲ್ಲ, ಕೊಲೆ ಎಂದು ಶಂಕಿಸಿದ್ದಾರೆ. ಸತೀಶ್ ಕುಮಾರ್ ಹತ್ಯೆಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ಟಿಟಿಡಿ ಮಂಡಳಿಯ ಪಾತ್ರವಿದೆ ಎಂದು ಕುಟುಂಬವು ಆರೋಪಿಸಿದೆ.




