ಈ ಕುರಿತು ಶನಿವಾರ ಪ್ರಕಟನೆ ಬಿಡುಗಡೆ ಮಾಡಿರುವ ಭಾರತೀಯ ಚುನಾವಣಾ ಆಯೋಗ, ಅಕ್ಟೋಬರ್ 6ರಂದು ಪ್ರಕಟಿಸಲಾಗಿದ್ದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಅಂತಿಮ ಪಟ್ಟಿಯಲ್ಲಿದ್ದ 7.42 ಲಕ್ಷ ಮತದಾರರ ಸಂಖ್ಯೆ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ನಂತರ ಸೆಪ್ಟೆಂಬರ್ 30ರಂದು ಪ್ರಕಟಿಸಲಾಗಿದ್ದ ಅಂತಿಮ ಮತಪಟ್ಟಿಯನ್ನು ಆಧರಿಸಿತ್ತು ಎಂದು ಹೇಳಿದೆ.
ಚುನಾವಣೆ ಘೋಷಣೆಯಾದ ನಂತರ, ಪ್ರತಿ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕಕ್ಕಿಂತ ಹತ್ತು ದಿನಗಳ ಮುನ್ನ ಯಾವುದೇ ಅರ್ಹ ಮತದಾರರು ತಮ್ಮ ಹೆಸರನ್ನು ಮತಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಅರ್ಜಿ ಸಲ್ಲಿಸಬಹುದು ಎಂಬ ಚುನಾವಣಾ ನಿಯಮಗಳನ್ನು ತನ್ನ ಪ್ರಕಟನೆಯಲ್ಲಿ ಚುನಾವಣಾ ಆಯೋಗ ಉಲ್ಲೇಖಿಸಿದೆ.
ಹೀಗಾಗಿ, ಅಕ್ಟೋಬರ್ 1ರಿಂದ ಪ್ರತಿ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕಕ್ಕಿಂತ ಹತ್ತು ದಿನಗಳ ಮುನ್ನ ತಮ್ಮ ಹೆಸರನ್ನು ಮತಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ ಯಾವುದೇ ಅರ್ಹ ಅರ್ಜಿದಾರರ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಯಾವುದೇ ಅರ್ಹ ಅರ್ಜಿದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅರ್ಹ ಅರ್ಜಿದಾರರ ಹೆಸರುಗಳನ್ನು ನಿಯಮಾನುಸಾರ ಮತಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಅಕ್ಟೋಬರ್ 1ರಿಂದ ಪ್ರತಿ ಹಂತದ ನಾಮಪತ್ರ ಸಲ್ಲಿಕೆಯ ಕೊನೆಯ ದಿನಕ್ಕಿಂತ ಹತ್ತು ದಿನಗಳ ಮುಂಚೆ ಸ್ವೀಕರಿಸಿದ್ದ ಅರ್ಜಿಗಳಿಂದ ಬಿಹಾರದಲ್ಲಿನ ಒಟ್ಟು ಮತದಾರರ ಸಂಖ್ಯೆ ಮೂರು ಲಕ್ಷದಷ್ಟು ಏರಿಕೆಯಾಗಿದೆ. ಈ ಪರಿಷ್ಕೃತ ಸಂಖ್ಯೆಯನ್ನು ಮತದಾನದ ಬಳಿಕ ಚುನಾವಣಾ ಆಯೋಗ ನೀಡಿದ್ದ ಪತ್ರಿಕಾ ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಹಾರದ ಮೊದಲ ಮತ್ತು ಅಂತಿಮ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕವನ್ನು ಕ್ರಮವಾಗಿ ಅಕ್ಟೋಬರ್ 17 ಹಾಗೂ ಅಕ್ಟೋಬರ್ 20ಕ್ಕೆ ನಿಗದಿಗೊಳಿಸಲಾಗಿತ್ತು.




