ದರ್ಭಾಂಗ: ಮಹಿಳೆಯರ ಖಾತೆಗೆ ವರ್ಗಾವಣೆಯಾಗಬೇಕಿದ್ದ ಬಿಹಾರ ಸರ್ಕಾರದ 'ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್' ಯೋಜನೆಯ ಹಣ ಪುರುಷರ ಖಾತೆಗಳಿಗೆ ವರ್ಗಾವಣೆಯಾಗಿದೆ. ಈ ಹಣವನ್ನು ವಾಪಸ್ ಪಡೆಯುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ದರ್ಭಾಂಗ ಜಿಲ್ಲೆಯ ಗ್ರಾಮವೊಂದರ ಪುರುಷರ ಬ್ಯಾಂಕ್ ಖಾತೆಗಳಿಗೆ ತಲಾ ₹10,000 ಪಾವತಿಯಾಗಿದ್ದು, ಅವರು ಅದನ್ನು ಬಳಕೆ ಮಾಡಿಕೊಂಡಿದ್ದಾರೆ.
ಕೆಲವರು ದೀಪಾವಳಿ ಹಬ್ಬಕ್ಕೆ ಹಣವನ್ನು ಬಳಸಿಕೊಂಡರೆ, ಇನ್ನೂ ಕೆಲವರು ಬಾತುಕೋಳಿ ಮತ್ತು ಮೇಕೆಗಳನ್ನು ಖರೀದಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಸೆಪ್ಟೆಂಬರ್ 26ರಂದು 'ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್' ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆಯಡಿಯಲ್ಲಿ ರಾಜ್ಯದ 1.40 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ ₹10,000 ವರ್ಗಾವಣೆ ಮಾಡಲಾಗಿತ್ತು.
ಆದರೆ ತಾಂತ್ರಿಕ ಕಾರಣಗಳಿಂದ ಕೆಲವು ಪುರುಷರ ಖಾತೆಗಳಿಗೂ ಹಣ ವರ್ಗಾವಣೆಯಾಗಿದೆ. ಈ ಹಣವನ್ನು ವಾಪಸ್ ನೀಡುವಂತೆ ಕನಿಷ್ಠ ಮೂವರಿಗೆ ನೋಟಿಸ್ ರವಾನಿಸಲಾಗಿದೆ. ಆದರೆ ಅವರು ಬಡವ, ಅಂಗವಿಕಲ ಎಂಬ ಸಬೂಬು ಹೇಳುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.
ಹಣ ಪಡೆದವರನ್ನು ನಾಗೇಂದ್ರ ರಾಮ್, ಬಲರಾಮ್ ಸಹ್ನಿ ಮತ್ತು ರಾಮ್ ಸಾಗರ್ ಕುಮಾರ್ ಎಂದು ಗುರುತಿಸಲಾಗಿದೆ.
'ಈ ಹಣವನ್ನು ಮರೆತುಬಿಡಿ ಅಥವಾ ಮನ್ನಾ ಮಾಡಿ' ಎಂದು ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮನವಿ ಮಾಡುತ್ತಿದ್ದಾರೆ.

