ಅಡಿಸ್ ಅಬಾಬ: ಭಾರತ ಮತ್ತು ಇಥಿಯೋಪಿಯಾ ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಂಪರ್ಕದಲ್ಲಿ ನೈಸರ್ಗಿಕ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಥಿಯೋಪಿಯಾ ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಮಂಗಳವಾರ ಇಥಿಯೋಪಿಯಾಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಇಥಿಯೋಪಿಯಾ ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದರು.
ಈ ವರ್ಷದ ಆರಂಭದಲ್ಲಿ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಪರಸ್ಪರ ಭದ್ರತೆಗೆ ನಮ್ಮ ಬದ್ಧತೆ ಬಲವಾಯಿತು. ಈ ವ್ಯವಸ್ಥೆಯು ನಿಕಟ ಮಿಲಿಟರಿ ಸಹಕಾರದ ಮೇಲೆ ಕೇಂದ್ರೀಕರಿಸುತ್ತದೆ. ಪ್ರಜಾಪ್ರಭುತ್ವವು ಜೀವನ ವಿಧಾನ ಎಂದು ಎರಡೂ ದೇಶಗಳು ಅರ್ಥ ಮಾಡಿಕೊಂಡಿವೆ. ರಾಷ್ಟ್ರದ ಚಕ್ರವು ಜನರೊಂದಿಗೆ ಸಾಮರಸ್ಯದಿಂದ ಚಲಿಸಿದಾಗ ಪ್ರಗತಿಯ ಚಕ್ರವು ಭರವಸೆ ಮತ್ತು ಉದ್ದೇಶದೊಂದಿಗೆ ಮುಂದುವರಿಯುತ್ತದೆ ಎಂದು ಮೋದಿ ಹೇಳಿದ್ದಾರೆ.
ಜಾಗತಿಕ ದಕ್ಷಿಣದ ಬಗ್ಗೆ ಪ್ರಸ್ತಾಪಿಸಿದ ಮೋದಿ `ಜಾಗತಿಕ ದಕ್ಷಿಣ ಯಾರ ವಿರುದ್ಧವೂ ಅಲ್ಲ. ಎಲ್ಲರಿಗಾಗಿ ಎಂಬುದು ನಮ್ಮ ಪರಿಕಲ್ಪನೆಯಾಗಿದೆ. ನಾವು ಒಟ್ಟಿಗೆ ನಿಲ್ಲುತ್ತೇವೆ ಮತ್ತು ಹೆಚ್ಚು ನ್ಯಾಯಯುತ, ಸಮಾನ ಮತ್ತು ಶಾಂತಿಯುತ ಜಗತ್ತಿಗಾಗಿ ಕೆಲಸ ಮಾಡುತ್ತೇವೆ. ಉಭಯ ದೇಶಗಳು ತಮ್ಮ ಐತಿಹಾಸಿಕ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆ ಮಟ್ಟಕ್ಕೆ ಏರಿಸಿವೆ' ಎಂದರು.
ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರೊಂದಿಗೆ ಮೋದಿ ನಡೆಸಿದ ವ್ಯಾಪಕ ಮಾತುಕತೆಯ ನಂತರ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದೇ ಸಂದರ್ಭ ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ` ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ'ವನ್ನು ಇಥಿಯೋಪಿಯಾ ಪ್ರಧಾನಿ ಅಲಿ ಪ್ರದಾನ ಮಾಡಿದರು.

