ತಿರುವನಂತಪುರಂ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಂದಾಗ ರಾಜ್ಯದ ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ 80 ರಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದೆ. ಆಡಳಿತ ಒಕ್ಕೂಟವಾದ ಎಡರಂಗಕ್ಕೆ 58 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರವೇ ಮುನ್ನಡೆ ಸಾಧಿಸಲು ಸಾಧ್ಯವಾಗಿದೆ.
ಬಿಜೆಪಿ ನೇತೃತ್ವದ ಎನ್‍ಡಿಎ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತಿರುವನಂತಪುರ ಜಿಲ್ಲೆಯ ನೇಮಂ ಮತ್ತು ವಟ್ಟಿಯೂರುಕಾವು ಎಂಬಲ್ಲಿ ಬಿಜೆಪಿ (ಎನ್‍ಡಿಎ) ಮುನ್ನಡೆ ಸಾಧಿಸಿರುವ ವಿಧಾನಸಭಾ ಕ್ಷೇತ್ರಗಳಾಗಿವೆ.
ಮಲಪ್ಪುರಂ, ವಯನಾಡು, ಪತ್ತನಂತಿಟ್ಟ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಯುಡಿಎಫ್ ಭಾರೀ ಪಾರಮ್ಯ ಹೊಂದಿದರೆ ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಪಾಲಕ್ಕಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಎಡರಂಗ ಅಲ್ಪ ಮುನ್ನಡೆ ಸಾಧಿಸಿದೆ. ಎಡರಂಗದ ಭದ್ರ ಕೋಟೆಯಾದ ಕಣ್ಣೂರಿನ ವಿಧಾನಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ ಗಿಂತ ಕೇವಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರವೇ ಎಡರಂಗ ಮುನ್ನಡೆ ಸಾಧಿಸಿದೆ.
ಬಿಜೆಪಿ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದ ತೃಶೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ ಎಂಬುವುದನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಗಳಿಕೆ ಪಟ್ಟಿ ಸೂಚಿಸುತ್ತಿದೆ.
ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಾದ ಮಂಜೇಶ್ವರ, ಕಾಸರಗೋಡು ಮತ್ತು ಉದುಮದಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದರೆ ಹೊಸದುರ್ಗ ಮತ್ತು ತೃಕರಿಪುರದಲ್ಲಿ ಎಡರಂಗ ಮುನ್ನಡೆ ಸಾಧಿಸಿದೆ.
ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಅದರಲ್ಲಿ ಯಾವ ರಾಜಕೀಯ ಒಕ್ಕೂಟಗಳು ಮುನ್ನಡೆ ಸಾಧಿಸಲಿವೆ ಎಂಬುವುದಕ್ಕಿರುವ ಒಂದು ದಿಕ್ಸೂಚಿಯಾಗಿದೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಫಲಿತಾಂಶ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. 2021 ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು 140 ಕ್ಷೇತ್ರಗಳ ಪೈಕಿ ಎಡರಂಗ-99 ಮತ್ತು ಐಕ್ಯರಂಗ-41 ಸ್ಥಾನಗಳನ್ನು ಗೆದ್ದಿತ್ತು. ಎನ್‍ಡಿಎಗೆ ಕನಿಷ್ಠ ಒಂದು ಸ್ಥಾನವೂ ಲಭಿಸಿರಲಿಲ್ಲ.



