ನವದೆಹಲಿ: ಮೈಕ್ರೋಸಾಫ್ಟ್ ಸಂಸ್ಥೆ ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮೂಲಸೌಕರ್ಯ, ಕೌಶಲ್ಯ ಮತ್ತು ಸ್ವಾವಲಂಬನೆಯನ್ನು ಅಭಿವೃದ್ಧಿಪಡಿಸಲು 17.5 ಬಿಲಿಯನ್ ಡಾಲರ್ (ಸುಮಾರು 1.5 ಲಕ್ಷ ಕೋಟಿ ರೂ) ಹೂಡಿಕೆ ಮಾಡುವುದಾಗಿ ಸಂಸ್ಥೆಯ ಸಿಇಒ ಸತ್ಯ ನಾದೆಲ್ಲಾ ಘೋಷಿಸಿದ್ದಾರೆ.
ಈ ಘೋಷಣೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ನೀಡಲಾಗಿದೆ.
ಮೈಕ್ರೋಸಾಫ್ಟ್ ಪ್ರಸ್ತಾಪಿಸಿರುವ ಹೂಡಿಕೆಯ ಮುಖ್ಯ ಉದ್ದೇಶಗಳು:
ಭಾರತದಲ್ಲಿ ಕ್ಲೌಡ್ ಮತ್ತು ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ವಿಸ್ತರಿಸುವುದು.
ಎಐ ಕೌಶಲ್ಯ ಕಾರ್ಯಕ್ರಮಗಳನ್ನು ಹೆಚ್ಚು ಜನರಿಗೆ ಲಭ್ಯವಾಗುವಂತೆ ಮಾಡುವುದು.
ಎಲ್ಲಾ ಕ್ಷೇತ್ರಗಳಲ್ಲಿ ಸ್ಥಳೀಯ ಡೇಟಾ ವ್ಯವಸ್ಥೆಗಳನ್ನು ಸ್ಥಾಪಿಸುವುದು.
ಭಾರತದ ಮಹತ್ವಾಕಾಂಕ್ಷೆಗೆ ಪೂರಕವಾಗಿ ನಮ್ಮ ಹೂಡಿಕೆ ಏಷ್ಯಾದಲ್ಲಿ ಮೈಕ್ರೋಸಾಫ್ಟ್‌ನ ಅತಿದೊಡ್ಡ ಹೂಡಿಕೆ ಆಗಿದೆ. ಇದು ಭಾರತದಲ್ಲಿ ಎಐ ಆದ್ಯತೆಯ ಭವಿಷ್ಯಕ್ಕಾಗಿ ಮೂಲಸೌಕರ್ಯ, ಕೌಶಲ್ಯ ಮತ್ತು ಸ್ವಾವಲಂಬನೆ ಶಕ್ತಿ ನಿರ್ಮಿಸಲು ನೆರವಾಗುತ್ತದೆ ಎಂದು ಸತ್ಯ ನಾದೆಲ್ಲಾ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇದೇ ವರ್ಷದ ಜನವರಿಯಲ್ಲಿ ಮೈಕ್ರೋಸಾಫ್ಟ್ ಮುಂದಿನ ಎರಡು ವರ್ಷಗಳಲ್ಲಿ 3 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿತ್ತು. ಈ ಯೋಜನೆಯಿಂದ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿಗೂ ಅಧಿಕ ಜನರಿಗೆ ಎಐ ತರಬೇತಿ ನೀಡಲಾಗುತ್ತದೆ.
ಮೈಕ್ರೋಸಾಫ್ಟ್ ಮಾತ್ರವಲ್ಲದೆ, ಅಮೇಜಾನ್ ಕೂಡ ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದೆ. ಅಮೇಜಾನ್ 12.7 ಬಿಲಿಯನ್ ಡಾಲರ್ ಹೂಡಿಕೆ ಯೋಜನೆ ಹೊಂದಿದ್ದು, ಕ್ಲೌಡ್ ಮತ್ತು ಎಐ ಮೂಲಸೌಕರ್ಯ ಅಭಿವೃದ್ಧಿ, ಸರ್ಕಾರಿ ಶಾಲಾ ಮಕ್ಕಳಿಗೆ ತರಬೇತಿ, ಸಣ್ಣ ಉದ್ಯಮಗಳಿಗೆ ಬೆಂಬಲ ನೀಡುವ ಕಾರ್ಯಗಳಲ್ಲಿ ತೊಡಗಲಿದೆ.

