HEALTH TIPS

ವಿಷ್ಣು ಪ್ರತಿಮೆ ಧ್ವಂಸ | 'ನೋಂದಾಯಿತ ಧಾರ್ಮಿಕ ಸ್ಥಳವಲ್ಲ': ಭಾರತದ ಆಕ್ಷೇಪಕ್ಕೆ ಥೈಲ್ಯಾಂಡ್ ಸ್ಪಷ್ಟನೆ

ಬ್ಯಾಂಕಾಕ್: ಥೈಲ್ಯಾಂಡ್-ಕಾಂಬೋಡಿಯಾ ಗಡಿ ಪ್ರದೇಶದಲ್ಲಿ ಥಾಯ್ ಸೇನೆಯಿಂದ ವಿಷ್ಣು ಪ್ರತಿಮೆಯನ್ನು ಕೆಡವಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತವು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಥೈಲ್ಯಾಂಡ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕೆಡವಲಾದ ಪ್ರತಿಮೆ ನೋಂದಾಯಿತ ಧಾರ್ಮಿಕ ಸ್ಥಳದಲ್ಲಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ವಿವಾದಿತ ಗಡಿ ಪ್ರದೇಶದಲ್ಲಿ 2014ರಲ್ಲಿ ನಿರ್ಮಿಸಲಾದ ವಿಷ್ಣುವಿನ ಪ್ರತಿಮೆಯನ್ನು ಥಾಯ್ ಸೇನೆ ಸೋಮವಾರ ಬ್ಯಾಕ್‌ಹೋ ಲೋಡರ್ ಬಳಸಿ ತೆರವುಗೊಳಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು.

ಘಟನೆಯ ಕುರಿತು ಗುರುವಾರ ಹೇಳಿಕೆ ಬಿಡುಗಡೆ ಮಾಡಿದ ಥಾಯ್-ಕಾಂಬೋಡಿಯನ್ ಗಡಿಯ ಮಾಧ್ಯಮ ಕೇಂದ್ರ, ಈ ಕ್ರಮವು ಧಾರ್ಮಿಕ ನಂಬಿಕೆಗಳನ್ನು ಅಗೌರವಿಸುವ ಉದ್ದೇಶದಿಂದ ಕೈಗೊಳ್ಳಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. "ಪ್ರದೇಶದ ನಿರ್ವಹಣೆ ಮತ್ತು ಭದ್ರತೆ ದೃಷ್ಟಿಯಿಂದ ಮಾತ್ರ ಈ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಧರ್ಮ ಅಥವಾ ಪವಿತ್ರ ಸಂಕೇತಗಳಿಗೆ ಅವಮಾನ ಮಾಡುವ ಉದ್ದೇಶವಿಲ್ಲ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರತಿಮೆಯನ್ನು ನಂತರದ ಅವಧಿಯಲ್ಲಿ ಸ್ಥಾಪಿಸಲಾಗಿದ್ದು, ಅದು ಅಧಿಕೃತವಾಗಿ ನೋಂದಾಯಿತ ಧಾರ್ಮಿಕ ಸ್ಥಳವಲ್ಲ ಎಂದು ಕೇಂದ್ರವು ಹೇಳಿದೆ. ಈ ಪ್ರದೇಶದ ಮೇಲಿನ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು, ತಪ್ಪು ತಿಳುವಳಿಕೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಮತ್ತು ಮುಂದಿನ ಉದ್ವಿಗ್ನತೆಯನ್ನು ತಪ್ಪಿಸಲು ಈ ಕ್ರಮ ಅಗತ್ಯವಾಯಿತು ಎಂದು ಅದು ವಿವರಿಸಿದೆ.

ಚೊಂಗ್ ಆನ್ ಮಾ ಪ್ರದೇಶದ ವಿವಾದಿತ ಗಡಿ ಭಾಗದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗಿದ್ದು, ಥಾಯ್ ಪ್ರದೇಶದ ಮೇಲೆ ಅಕ್ರಮವಾಗಿ ಸಾರ್ವಭೌಮತ್ವ ಪ್ರದರ್ಶಿಸುವ ಸಂಕೇತಗಳಾಗಿ ಕಾಂಬೋಡಿಯನ್ ಪಡೆಗಳು ಇವುಗಳನ್ನು ಸ್ಥಾಪಿಸಿದ್ದವೆಂಬ ಆರೋಪವನ್ನೂ ಥಾಯ್ ಅಧಿಕಾರಿಗಳು ಮಾಡಿದ್ದಾರೆ. ಡಿಸೆಂಬರ್ 22ರಂದು ನಡೆದ ಕಾರ್ಯಾಚರಣೆಯ ನಂತರ ಥಾಯ್ ಸೇನೆ ಈ ಪ್ರದೇಶದ ನಿಯಂತ್ರಣವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ಹಿಂದೂ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳು ಮತ್ತು ನಂಬಿಕೆಗಳಿಗೆ ಥೈಲ್ಯಾಂಡ್ ಸಮಾನ ಗೌರವ ನೀಡುತ್ತದೆ ಎಂದು ಪ್ರಕಟಣೆ ತಿಳಿಸಿದ್ದು, ಈ ಪ್ರದೇಶದ ರಾಷ್ಟ್ರಗಳೊಂದಿಗೆ ಥೈಲ್ಯಾಂಡ್‌ಗೆ ದೀರ್ಘಕಾಲದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳಿವೆ ಎಂದು ಅದು ಉಲ್ಲೇಖಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries